Slider

ಶಿವಗಂಗೆ ಬೆಟ್ಟ : ಐತಿಹಾಸಿಕ ಟ್ರೆಕ್ಕಿಂಗ್ ದೇವಸ್ಥಾನ

  ಬೆಂಗಳೂರಿನ ಆಜೂ ಬಾಜುನಲ್ಲಿ ಒಂದು ದಿನದಲ್ಲಿ ಹೋಗಿ ಬರಬಹುದಾದ ಶಿವನ ದೇವಸ್ಥಾನ ಹಾಗೂ ಟ್ರೆಕ್ಕಿಂಗ್ ಗೆ ಸೂಕ್ತ ಜಾಗ ಹುಡುಕುತ್ತಾ ಇದ್ದೀರಾ?

ಬೆಂಗಳೂರಿನ ನೆಲಮಂಗಲ ತಾಲ್ಲೂಕಿನಲ್ಲಿರುವ ಎರಡು ಶಿವನ ದೇವಸ್ಥಾನ, ಹಲವು ಪವಿತ್ರ ತೀರ್ಥ, ಶಾರದಾ ದೇವಸ್ಥಾನ, ಶೃಂಗೇರಿ ಮಠ, ಉತ್ತಮ ಟ್ರೆಕ್ಕಿಂಗ್ ಜಾಗ, ಸುಂದರ ಪರಿಸರ ಎಲ್ಲಾ ಇರುವ ಶಿವಗಂಗೆ ಬೆಟ್ಟದ ಬಗ್ಗೆ ನಿಮಗೆ ಗೊತ್ತೆ?

ಬನ್ನಿ ಶಿವಗಂಗೆ ಬೆಟ್ಟ ಬಗ್ಗೆ ಅಲ್ಲಿ ಹೋಗುವದು ಹೇಗೆ, ಪ್ರವಾಸಿ ಟಿಪ್ಸ್ ಗಳನ್ನು ಇಲ್ಲಿ ನೋಡೋಣ.

ಶಿವಗಂಗೆ ಬೆಟ್ಟ ಎಲ್ಲಿದೆ?


ಬೆಂಗಳೂರಿನ ತುಮಕೂರು ರಸ್ತೆ(ಎನ್ ಎಚ್-೪೮) ಯಲ್ಲಿ ಸಾಗಿ ನೆಲಮಂಗಲ ದಾಟಿ ಅಲ್ಲಿಂದ ೧೫ ಕಿಮಿ ಮುಂದೆ ಕೆರೆಕತ್ತಿಗನೂರಿನ ಕಡೆ ತಿರುಗಬೇಕು. ಅಲ್ಲೇ ಮುಂದೆ ಸುಮಾರು ೧೧ಕಿಮಿ ದೂರ ಸಾಗಿದರೆ ಶಿವಗಂಗೆ ಬೆಟ್ಟದ ಬುಡ ಸಿಗುತ್ತದೆ. ಸುಮಾರು ಬೆಂಗಳೂರಿನಿಂದ ೫೪ಕಿಮಿ ದೂರ ಇದೆ.

ಅದೇ ರೀತಿ ತುಮಕೂರಿನಿಂದ ದಾಬಸ್ ಪೇಟೆಗೆ ಬಂದು ಅಲ್ಲಿಂದ ಬರಬಹುದು. ತುಮಕೂರಿನಿಂದ ಸುಮಾರು ೩೦ಕಿಮಿ ದೂರದಲ್ಲಿ ಇದೆ.

ಅಲ್ಲಿಂದ ಸುಮಾರು ೨.೫ ಕಿಮಿ ಏರು ಮುಖದಲ್ಲಿ ಬೆಟ್ಟ ಹತ್ತಿದರೆ ಬೆಟ್ಟದ ತುದಿ ತಲುಪಬಹುದು. ಬೆಟ್ಟ ಹತ್ತುವ ದಾರಿಯಲ್ಲೂ ಕೂಡಾ ಹಲವಾರು ದೇವಸ್ಥಾನಗಳು ನಮಗೆ ಸಿಗುತ್ತದೆ.

ಎಲ್ಲಿಂದದೂರ
ಬೆಂಗಳೂರು೫೪
ತುಮಕೂರು೩೦

ಶಿವಗಂಗೆ ಬೆಟ್ಟ ಪ್ರವಾಸ ಯಾರಿಗೆ ಸೂಕ್ತ?


ಶಿವಗಂಗೆ ಈ ಮುಂದಿನ ರೀತಿಯ ಪ್ರವಾಸಕ್ಕೆ ಸೂಕ್ತ
  • ದೇವರ ದರ್ಶನ - ಗವಿಗಂಗಾಧರೇಶ್ವರ, ಹೊನ್ನಮ್ಮ ದೇವಿ, ಒಳಕಲ್ ತೀರ್ಥ, ದ್ವಾದಶ ಲಿಂಗ, ಶಾರದಾ ದೇವಸ್ಥಾನ, ಶೃಂಗೇರಿ ಮಠ, ಗಿರಿಗಂಗಾಧರೇಶ್ವರ
  • ಟ್ರೆಕ್ಕಿಂಗ್ - ಇಂತಹ ಸಾಹಸ ಮಾಡಿ ಸುರಕ್ಷಿತವಾಗಿ ಗುಡ್ಡ ಹತ್ತುವ ಅವಕಾಶ ಎಲ್ಲ ಕಡೆ ಸಿಗದು.
  • ಪರಿಸರ ವೀಕ್ಷಣೆ - ಬೆಟ್ಟದ ಸುತ್ತ ಇರುವ ಕಾಡು, ಪರಿಸರ ನೋಡಿಯೇ ಅನುಭವಿಸಬೇಕು.
  • ಐತಿಹಾಸಿಕ ಜಾಗ ವೀಕ್ಷಣೆ - ಇದು ಹೊಯ್ಸಳ ಕಾಲದಿಂದ ಹಿಡಿದು ಶಿವಪ್ಪ ನಾಯಕ, ಕೆಂಪೆಗೌಡರ ಕಾಲದ ವರೆಗಿನ ಇತಿಹಾಸ ಹೊಂದಿದೆ.

ಅಕಸ್ಮಾತ್ ನೀವು  ಒಂದು ಕಡೆಗೆ ಹೋಗಿ ಮುಕ್ಕಾಲು ಗಂಟೆಯಲ್ಲಿ ದೇವರ ದರ್ಶನ ಮಾಡಿ ವಾಪಸ್ ಹೊರಡ ಬೇಕೆಂಬ ಉದ್ದೇಶ ಹೊಂದಿದ್ದರೆ ಖಂಡಿತ ಶಿವಗಂಗೆ ಬೆಟ್ಟ ಸೂಕ್ತ ಅಲ್ಲ.

ನೀವು ಬೆಟ್ಟದ ತುತ್ತ ತುದಿ ಮುಟ್ಟಿ ದೇವರ ದರ್ಶನ ಮಾಡಿ ಬರಲು ನಾಲ್ಕೈದು ಗಂಟೆ ಆದರೂ ಬೇಕು.  ಒಟ್ಟೂ ನಾಲ್ಕು ದೇವಸ್ಥಾನ ಈ ಬೆಟ್ಟದ ದಾರಿಯಲ್ಲಿದೆ. ಇನ್ನು ಬೆಟ್ಟದ ಬುಡದಲ್ಲಿ ಶಾರದಾಂಬಾ ದೇವಸ್ಥಾನ ಸಹ ಇದೆ. ಕನಿಷ್ಟ ಅರ್ಧದಿಂದ ಮುಕ್ಕಾಲು ದಿನ ಸಮಯ ಮಾಡಿಕೊಂಡು ಬರುವದು ಒಳ್ಳೆಯದು.

ಬೆಟ್ಟದ ಸುಮಾರು ೨೦೦ ಮೆಟ್ಟಿಲು ಹತ್ತಿದರೆ ಹೊನ್ನಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವರ ದರ್ಶನ ಪಡೆಯಬಹುದು. ಶಿವಗಂಗೆಯ ಬೆಟ್ಟದ ಕೊನೆಯ ದೇವಸ್ಥಾನಕ್ಕೆ ಹೋಗುವ ದಾರಿ ತೀರಾ ಕಡಿದಾಗಿದ್ದು ಅದನ್ನು ಹತ್ತಲು ತುಂಬಾ ಪರಿಶ್ರಮ ಬೇಕು. ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು, ಆರೋಗ್ಯದ ಸಮಸ್ಯೆ ಇರುವವರು, ಮಂಡಿ ಮಂಡಿ ನೋವಿರುವವರು ಈ ಬೆಟ್ಟದ ತುದಿ ತಲುಪುವ ಸಾಹಸ ಮಾಡದಿರುವದು ವಾಸಿ. 

ಉಳಿದವರು ಕೂಡಾ ಮಧ್ಯೆ ಮಧ್ಯೆ ಕುಳಿತು ನೀರು, ಪಾನೀಯ ಸೇವಿಸುತ್ತಾ ಸುಧಾರಿಸಿಕೊಂಡು ನಿಧಾನವಾಗಿ ಹತ್ತುವದು ಕ್ಷೇಮ.

ಬೆಟ್ಟದ ಇತಿಹಾಸ

ಶಿವಗಂಗೆ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ. ಬಹಳ ಹಿಂದೆ ಈ ಬೆಟ್ಟಕ್ಕೆ ಕಕುದ್ಗಿರಿ ಎಂಬ ಹೆಸರಿನಿಂದ ಕರೆಯಲಾಗುತಿತ್ತು.

ಹೊಯ್ಸಳ ರಾಜನಾದ ವಿಷ್ಣುವರ್ಧನನ ಹೆಂಡತಿ ಶಾಂತಲಾ ತನಗೆ ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಈ ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಳಂತೆ. ಆ ಜಾಗಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತಿದೆ.

ಶಿವಪ್ಪ ನಾಯಕ ಇಲ್ಲಿ ಕೋಟೆಯನ್ನು ೧೬ನೇ ಶತಮಾನದಲ್ಲಿ ಕಟ್ಟಿದರೆ ಆಮೇಲೇ ಕೆಂಪೆಗೌಡರು ತಮ್ಮ ಖಜಾನೆಯ ಒಂದು ಭಾಗ ಇಲ್ಲಿ ರಕ್ಷಿಸಿಟ್ಟಿದ್ದರು. ಆ ಖಜಾನೆಯ ಕೋಣೆಯನ್ನೂ ಈಗಲೂ ನೋಡಬಹುದು.

ಈಗಲೂ ಕೂಡಾ ಶಿವಪ್ಪ ನಾಯಕ ಕಟ್ಟಿಸಿದ ಕೋಟೆಯ ಅಳಿದುಳಿದ ಭಾಗ ನೋಡಬಹುದು. ನೀವು ಹೊನ್ನಮ್ಮ ದೇವಿಯ ದೇವಸ್ಥಾನ ನೋಡಿ ದೇವಾಲಯದ ಆವರಣ ದಾಟಿ ಹೊರ ಹೋಗುವಾಗ ಗುಡ್ಡದ ಮೇಲೆ ಕೋಟೆಯ ಗೋಡೆ ಕಾಣಿಸುತ್ತದೆ.

ಬೆಟ್ಟದಲ್ಲಿರುವ ದೇವಸ್ಥಾನಗಳು ಮತ್ತು ಸ್ಥಳಗಳು

ಶಿವಗಂಗೆ ಬೆಟ್ಟದ ಮೇಲೆ ಈ ಮುಂದಿನ ಪ್ರೇಕ್ಷಣೀಯ ಸ್ಥಳ ಹಾಗೂ ದೇವಸ್ಥಾನಗಳಿವೆ.
  • ಹೊನ್ನಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನ
  • ಒಳಕಲ್ ತೀರ್ಥ
  • ಕೆಂಪೆಗೌಡರ ಖಜಾನೆ
  • ಶಿವ, ಪಾರ್ವತಿ, ನಂದಿ, ದ್ವಾದಶ ಲಿಂಗ ದೇವಸ್ಥಾನ
  • ಬೆಟ್ಟದ ತುದಿಯಲ್ಲಿನ ನಂದಿ ವಿಗ್ರಹ
  • ಗಿರಿ ಗಂಗಾಧರೇಶ್ವರ ದೇವಸ್ಥಾನ

ಮೊದಲು ಶಿವಲಿಂಗ ಬೆಟ್ಟದ ಕೆಳಗಿರುವ ಊರ ಹೊರಗೆ ಗೋಪುರ ಸಹಿತ ದ್ವಾರ ನಮ್ಮನ್ನು ಸ್ವಾಗತಿಸುತ್ತೆ. ವಾಹನಕ್ಕೆ ಒಳಗೆ ಹೋಗಲು ಮುವತ್ತು ರೂ ಪ್ರವೇಶ ಶುಲ್ಕ ಇದೆ. 

ಮುಂದಿನ ಚಿತ್ರದಲ್ಲಿ ಊರಿನ ಪ್ರವೇಶ ದ್ವಾರ ಕಾಣಬಹುದು.


ಈ ಇಕ್ಕಟ್ಟಾದ ದ್ವಾರದ ಮೂಲಕ ವಾಹನ ತೂರಿಸಿಕೊಂಡು ಒಳ ಹೋಗಿ ನೇರ ಹೋದರೆ ಎಡ ಭಾಗದಲ್ಲಿ ಗುಡ್ಡ ಹತ್ತುವ ಪ್ರವೇಶ ದ್ವಾರ ಕಾಣ ಸಿಗುತ್ತದೆ. ಅಲ್ಲಿ ಬಲ ಭಾಗದಲ್ಲಿ ತಿರುಗಿ ಸ್ವಲ್ಪ ದೂರ ಹೋದರೆ ಕಲ್ಯಾಣಿಯ ಅಕ್ಕ ಪಕ್ಕ ನಮ್ಮ ವಾಹನ ನಿಲ್ಲಿಸಬಹುದು.

ಗುಡ್ಡ ಹತ್ತುವ ಪ್ರವೇಶ ದ್ವಾರ



ಮುಂದಿನ ಚಿತ್ರ ಗುಡ್ಡದ ಮುಂದಿನ ಕಲ್ಯಾಣಿ ಹತ್ತಿರದ ಮಾರ್ಕೆಟ್


ಬೆಟ್ಟದ ಪ್ರವೇಶ ದ್ವಾರದ ಮೂಲಕ ಒಳ ಹೋಗಿ ಸುಮಾರು ೨೦೦ ಮೆಟ್ಟಿಲು ಹತ್ತಿದಾಗ ಹೊನ್ನಮ್ಮ ದೇವಿಯ ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನ ಇದೆ.

ಗವಿ ಎಂದರೆ ಗುಹೆ, ಗಂಗಾಧರ ಎಂದರೆ ಗಂಗೆ ಧರಿಸಿದ ಎಂದು ಅರ್ಥ. ಈಶ್ವರ ಎಂದರೆ ಶಿವ. ಗುಹೆಯಲ್ಲಿರುವ ಗಂಗೆಯನ್ನು ಧರಿಸಿರುವ ಶಿವ ಎಂದರೆ ಗವಿಗಂಗಾಧರೇಶ್ವರ.

ಹೊನ್ನಮ್ಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವಾಲಯದ ಆವರಣ.


ದೇವಸ್ಥಾನದ ಗೋಪುರ.

ಗವಿ ಗಂಗಾಧರ ದೇವಸ್ಥಾನದ ಬಳಿಯ ಬಸವಣ್ಣ


ದ್ವಾದಶ ಲಿಂಗ ದೇವಸ್ಥಾನದ ಮುಂದೆ ಶಿವ, ಪಾರ್ವತಿ, ನಂದಿ ಮೂರ್ತಿಗಳಿವೆ.


ಅಲ್ಲಲ್ಲಿ ಪುಟ್ಟ ನೀರಿನ ಕೊಳಗಳಿವೆ.


ಮುಂದಿನ ಚಿತ್ರ ಗುಡ್ಡದ ತುದಿಯಲ್ಲಿ ಹೋಗುವ ದಾರಿಯ ಪಕ್ಕ ಇರುವ ಬಸವಣ್ಣ

ಶಿವಗಂಗೆ ಬೆಟ್ಟದ ತುದಿಯಲ್ಲಿರುವ ಗಿರಿಗಂಗಾಧರೇಶ್ವರ ದೇವಸ್ಥಾನ



ಬೆಟ್ಟದ ಕೆಳಗೆ ಕಲ್ಯಾಣಿಯ ಪಕ್ಕ ಸ್ವಲ್ಪ ದೂರ ನಡೆದರೆ ಶಾರದಾ ದೇವಸ್ಥಾನ ಹಾಗೂ ಶೃಂಗೇರಿ ಶಿವಗಂಗಾ ಶಾರದಾ ಮಠ ಇದೆ. ಅಲ್ಲಿಗೂ ಹೋಗಿ ಶಾರದಾಂಬೆಯ ದರ್ಶನ ಪಡೆದು ಬರಬಹುದು.



ಯಾವ ಕಾಲ ಸೂಕ್ತ?

ಬೆಟ್ಟ ಹತ್ತಲು ಸುಡು ಬಿಸಿಲು ಇದ್ದಾಗ ಕಷ್ಟ, ಬಂಡೆ ಎಲ್ಲಾ ಬಿಸಿಯಾಗಿ ಕಾದಿರುತ್ತದೆ. ಜೋರಾಗಿ ಮಳೆ ಇದ್ದರೂ ಕಷ್ಟ. ಅಕ್ಟೋಬರ್ ನಿಂದ ಮಾರ್ಚ್ ಉತ್ತಮ. ಎಪ್ರಿಲ್, ಮೇ ತಿಂಗಳು ಬಿಸಿಲು ಜಾಸ್ತಿ ಇರುವ ಸಾಧ್ಯತೆ ಜಾಸ್ತಿ.

ಬೆಳಿಗ್ಗೆ ಬೇಗ  ೯ ಗಂಟೆ ಒಳಗೆ ಹತ್ತಲಾರಂಭಿಸಿದರೆ ಕಡಿಮೆ ಬಿಸಿಲಿದ್ದು ನಿಧಾನವಾಗಿ ಜಾಗರೂಕತೆಯಿಂದ ಹತ್ತಿ ಎಲ್ಲ ದೇವಸ್ಥಾನ ನೋಡಿ ಕೆಳಗೆ ಕೂಡಾ ನಿಧಾನವಾಗಿ ಇಳಿಯಬಹುದು.

ದೇವಾಲಯ ಬೆಳಿಗ್ಗೆ ೮:೩೦ ಯಿಂದ ೫ ಗಂಟೆಯವರೆಗೆ ತೆರೆದಿರುತ್ತದೆ.

ಬೆಟ್ಟ ಹತ್ತಲು ಟಿಪ್ಸ್

ಈ ಬೆಟ್ಟ ಹತ್ತಲು ಒಂದಿಷ್ಟು ಟಿಪ್ಸ್ ನಿಮಗಾಗಿ.

೧. ಬೇಗ ಬೆಟ್ಟ ಹತ್ತಲು ಆರಂಭಿಸಿ

ಬೆಳಿಗ್ಗೆ ಬೇಗ ೯ ಗಂಟೆಯೊಳಗೆ ಬೆಟ್ಟ ಹತ್ತಲಾರಂಭಿಸಿದರೆ ಊಟದ ವೇಳೆಗೆ ಕೆಳಗೆ ಇಳಿಯಬಹುದು. ತಡವಾದಷ್ಟು ಬಿಸಿಲಿನ ಜಳಕ್ಕೆ ಬಂಡೆ ಕಾದು ಅನನುಕೂಲವೇ ಜಾಸ್ತಿ.

ತೀರಾ ಮಳೆ ಇದ್ದಾಗ, ಬಿಸಿಲಿನ ಜಳ ಜಾಸ್ತಿ ಇರುವ ಮಟ ಮಟ ಮಧ್ಯಾಹ್ನ,  ಹಾಗೂ ಸಂಜೆಯ ವೇಳೆಗೆ ಬೆಟ್ಟ ಹತ್ತದಿರಿ.

೨. ಬ್ಯಾಕ್ ಪ್ಯಾಕ್ ಬಳಸಿ


ಬ್ಯಾಕ್ ಪ್ಯಾಕ್ ಬಳಸಿ ಅದರಲ್ಲಿ ನೀರು, ಬಾಳೆ ಹಣ್ಣು, ತಿನಿಸುಗಳು ಇರಲಿ. ಸಾಧ್ಯವಾದಷ್ಟು ಕೈಗಳೆರಡೂ ಬರಿದಾಗಿರಲಿ. ಕೈಯಲ್ಲಿ ಒಂದು ನೀರಿನ ಬಾಟಲಿ, ಬ್ಯಾಗ್ ಇದ್ದರೂ ಹತ್ತುವಾಗ / ಇಳಿವಾಗ ಅದರಿಂದ ಅಡಚಣೆಯೇ ಜಾಸ್ತಿ!  ಬೆನ್ನ ಹಿಂದೆ ಹಾಕುವ ಬ್ಯಾಗ್ ಈ ತರಹದ ಚಾರಣಕ್ಕೆ ಸೂಕ್ತ. 

ತುದಿ ತಲುಪಿದ ಹಾಗೆ ಗುಡ್ಡದ ಮೆಟ್ಟಿಲು ತೀರಾ ಕಡಿದಾಗಿದೆ. ಸ್ಟೀಲ್ ಗ್ರಿಲ್ ಹಿಡಿದು ನಿಧಾನವಾಗಿ ಹತ್ತಬೇಕು / ಇಳಿಯಬೇಕು. ಎರಡೂ ಕೈ ಬರಿದಾಗಿದ್ದರೆ ಅನುಕೂಲ.

ಬ್ಯಾಕ್ ಪ್ಯಾಕ್ ಅಲ್ಲೂ ಜಾಸ್ತಿ ವಸ್ತು ತುಂಬಿಕೊಂಡು ಭಾರ ಮಾಡಿ ಕೊಳ್ಳ ಬೇಡಿ.

೩. ನಿಧಾನವಾಗಿ ಸುಧಾರಿಸಿಕೊಳ್ಳುತ್ತಾ ಹತ್ತಿರಿ / ಇಳಿಯಿರಿ


ತುಂಬಾ ಅವಸರದಲ್ಲಿ ಹತ್ತಬೇಡಿ. ಆಗ ಸುತ್ತ ಮುತ್ತಲಿನ ಪೃಕೃತಿ ಸೌಂದರ್ಯ ನೋಡುವ ಆಹ್ಲಾದಿಸುವ ಅವಕಾಶ ಕಳೆದು ಕೊಳ್ಳುವಿರಿ. ಸುಸ್ತು ಕೂಡಾ ಬೇಗ ಆಗುವದು.

ಕೊನೆಯಲ್ಲಿ ತುತ್ತ ತುದಿಯಲ್ಲಿ ಬೆಟ್ಟ ಕಡಿದಾಗಿದ್ದು ಮೊದಲೇ ನಿಮ್ಮ ಎಲ್ಲ ಶಕ್ತಿ ಕಳೆದುಕೊಂಡರೆ ಹತ್ತುವದು ಕಷ್ಟ ಆದೀತು.

೪. ಆಗಾಗ ಕುಳಿತು ದಣಿವಾರಿಸಿ ಕೊಂಡು ಸಾಗಿ


ಬೆಟ್ಟದ ದಾರಿಯ ನಡುವೆ ಹಲವು ಅಂಗಡಿಗಳಿವೆ. ಅಲ್ಲಿ ಕೂರಲು ಜಾಗವಿದೆ. ಸುಸ್ತಾದಾಗ ಅಲ್ಲಿ ಕೂತು ನೀರು ಕುಡಿದು, ಜ್ಯೂಸ್ ಕುಡಿಯಿರಿ. ಹಸಿವಾದಾಗ ಹಣ್ಣು ಹಂಪಲು ತಿನಿಸು ತಿನ್ನಿ. ಹಾಗೆ ದಣಿವಾರಿಸಿಕೊಂಡಾಗ ಮುಂದೆ ನಡೆಯಲು ಶಕ್ತಿ, ಹುರುಪು ಬರುತ್ತದೆ.

೫. ತುಂಬಾ ಚಿಕ್ಕ ಮಕ್ಕಳನ್ನು ಜೊತೆಗೆ ತುತ್ತ ತುದಿಗೆ ಒಯ್ಯಬೇಡಿ


ತುಂಬಾ ಚಿಕ್ಕ ಮಕ್ಕಳನ್ನು ಜೊತೆಗೆ ತುತ್ತ ತುದಿಯವರೆಗೆ ಒಯ್ಯದಿರುವದು ಉತ್ತಮ. ಮೇಲೆ ಹೋದಂತೆ ದಾರಿ ತೀರಾ ಕಡಿದಾಗಿದೆ. ಮಕ್ಕಳನ್ನು ಎತ್ತಿಕೊಂಡು ಅದನ್ನು ಹತ್ತುವದು / ಇಳಿಯುವದು ಸೂಕ್ತವಲ್ಲ.

೬. ಎಲ್ಲೆಂದರಲ್ಲಿ ಕಸ ಬಿಸಾಕಬೇಡಿ

ಕಸವನ್ನು ಅಂಗಡಿಗಳಲ್ಲಿ ಇರುವ ಕಸದ ಬುಟ್ಟಿಯಲ್ಲಿ ಹಾಕಿ. ಬೆಟ್ಟದಲ್ಲಿ ಬಿಸಾಕಿ ಗಲೀಜು ಮಾಡಬೇಡಿ. ಇಡಿ ಬೆಟ್ಟದ ಹಾದಿಯಲ್ಲಿ ಜನ ಪ್ಲಾಸ್ಟಿಕ್ ಬಾಟಲ್, ಕವರ್ ಮೊದಲಾದದ್ದನ್ನು ಬಿಸಾಕಿದ್ದರು. ದಯಮಾಡಿ ಕಸವನ್ನು ಕಸದ ಬುಟ್ಟಿಗೆ ಹಾಕಿ. ಪ್ರತಿ ಅಂಗಡಿಯಲ್ಲೂ ಕಸದ ಬುಟ್ಟಿ ಇದೆ. ಅದರಲ್ಲೇ ಕಸ ಹಾಕಿ ಅಲ್ವಾ?

೭. ಉತ್ತಮ ಶೌಚಾಲಯ ಇರುವದು ಬೆಟ್ಟದ ಬುಡದಲ್ಲಿ ಮಾತ್ರ 

ಬೆಟ್ಟದ ಬುಡದಲ್ಲಿ ಮಾರ್ಕೆಟ್ ಹತ್ತಿರ ಕಲ್ಯಾಣಿ ಪಕ್ಕ ಶೌಚಾಲಯ ಇದೆ. ಅದನ್ನು ಬಿಟ್ಟರೆ ಬೆಟ್ಟ ೫೦ ಮೆಟ್ಟಿಲು ಹತ್ತಿದರೆ ಅಲ್ಲಿ ಅನ್ನ ದಾಸೋಹ ಕೇಂದ್ರದಲ್ಲಿ ಇನ್ನೊಂದು. 

ಬೆಟ್ಟದ ದಾರಿಯಲ್ಲಿ ಇನ್ನೆಲ್ಲೂ ಉತ್ತಮ ಪಬ್ಲಿಕ್ ಶೌಚಾಲಯ ಇಲ್ಲ. ಒಂದು ಇದ್ದರೂ ಅದಕ್ಕೆ ಬಾಗಿಲಿಲ್ಲ. ಬೆಟ್ಟ ಹತ್ತಿಳಿಯಲು ಕನಿಷ್ಟ ನಾಲ್ಕು ಗಂಟೆ ಆದರೂ ಬೇಕು. ಬೆಟ್ಟ ಹತ್ತುವ ಮುನ್ನ ಒಮ್ಮೆ ಬೆಟ್ಟದ ಕೆಳಗೆ ಶೌಚಾಲಯಕ್ಕೆ ಹೋಗುವದು ಉತ್ತಮ.

ಕೊನೆಯ ಮಾತು

ಒಟ್ಟಿನಲ್ಲಿ ಶಿವಗಂಗೆ ಉತ್ತಮ ಪ್ರವಾಸಿ ತಾಣ. ಒಂದು ಕಡೆ ದೇವರ ದರ್ಶನ, ಐತಿಹಾಸಿಕ ಹಿನ್ನೆಲೆ, ಜೊತೆಗೆ ಟ್ರೆಕ್ಕಿಂಗ್ ಅನುಭವ.  ಬೆಂಗಳೂರಿನಿಂದ ಒಂದುವರೆ-ಎರಡು ಗಂಟೆಯೊಳಗೆ ತಲುಪುವಷ್ಟು ಹತ್ತಿರ ಇರುವ ಈ ತಾಣ ವೀಕೆಂಡ್ ಅಲ್ಲಿ ಒಂದೇ ದಿನದಲ್ಲಿ  ಹೋಗಿ ಬರುವಂತಹ ಜಾಗ ಎನ್ನಬಹುದು.

ನೀವು ಶಿವಗಂಗೆ ಬೆಟ್ಟ ಹತ್ತಿದ್ದೀರಾ? ನಿಮ್ಮ ಅನುಭವ ಏನು?

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ