Slider

ಥಾಯ್ಲೆಂಡ್ ಪ್ರವಾಸ : ಸಫಾರಿ ವರ್ಲ್ಡ್, ಬ್ಯಾಂಕಾಕ್ : ಭಾಗ ೧

 ಆ ದಿನ ಸಫಾರಿ ವರ್ಲ್ಡ್ ಪ್ರಾಣಿ ಸಂಗ್ರಹಾಲಯಕ್ಕೆ ಹೋಗೋದು ಎಂದು ಟ್ರಾವೆಲ್ ಏಜೆಂಟ್ ಮೊದಲೇ ತಿಳಿಸಿದ್ದ. ಬೆಳಿಗ್ಗೆ ೮:೩೦ ಒಳಗೆ ಸ್ನಾನ ಮಾಡಿ ಹೋಟೆಲ್ ಅಲ್ಲಿ ಕೊಟ್ಟ ಕಾಂಪ್ಲಿಮೆಂಟ್ ತಿಂಡಿ ತಿಂದು ರೆಡಿ ಆಗಿರಬೇಕಿತ್ತು.

ನಾಲ್ಕು ಸ್ಟಾರ್ ಹೋಟೆಲ್ ನ ಬಾತ ರೂಂ ಅಲ್ಲಿ ಬಿಸಿ ಬಿಸಿ ಶಾವರ್ ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಿ ಲಿಫ್ಟ್ ಮೂಲಕ ಕೆಳಗೆ ಬಂದು ರೆಸ್ಟಾರೆಂಟ್  ವಿಭಾಗಕ್ಕೆ ಬೆಳಿಗ್ಗೆ ೮ಕ್ಕೆ ಬಂದೆವು.

ಅಪ್ಪಟ ಸಸ್ಯಾಹಾರಿ ಆದ ನಮಗೆ ಇದ್ದ ಆಯ್ಕೆ ಎಂದರೆ ಬ್ರೆಡ್, ಜಾಮ್, ಬಿಟ್ಟರೆ ಹಣ್ಣಿನ ತುಂಡುಗಳು, ಜ್ಯೂಸ್ ಮಾತ್ರ. ಅದನ್ನೇ ತಿಂದು ಮುಗಿಸುವದರಲ್ಲಿ ಏಜೆಂಟ್ ಕಳಿಸಿದ ಕಪ್ಪು ಫಾರ್ಚುನರ್ ಕಾರ್ ಬಂದು ನಿಂತಿತ್ತು. ಅದಕ್ಕೆ ಒಬ್ಬ ಲೇಡಿ ಡ್ರೈವರ್. (ಡ್ರೈವರಿಣಿ!)

ಇಲ್ಲಿಯವರೆಗೆ ಫಾರ್ಚುನರ್ ಕಾರ್ ಅನ್ನು ಕೇವಲ ನೋಡಿದ್ದ ನಾನು ಒಂದು ದಿನ ಒಳಗೆ ಕೂರುವ ಅವಕಾಶ ಬಂತೆಂದು ಹಿಗ್ಗಿದೆ.

ನಮ್ಮೆಲ್ಲರನ್ನು ಹೊತ್ತ ಕಪ್ಪು ಫಾರ್ಚುನರ್ ಕಾರ್ ನಮ್ಮ ಹೋಟೆಲ್ ನಿಂದ ಮುಖ್ಯ ರಸ್ತೆಗೆ ಬಂದು ಹೈವೇ ಟೋಲ್ ಅಲ್ಲಿ ಹಣ ಸಂದಾಯ ಮಾಡಿ ಹೈವೇ ಮೂಲಕ ಥಾಯ್ಲೆಂಡಿನ ಸಫಾರಿ ವರ್ಲ್ಡ್ ಕಡೆಗೆ ಸಾಗಿತು.

ಅಗಲವಾದ ಹೈವೇ, ಬಿಳಿ ಬಣ್ಣದಿಂದ ಸರಿಯಾಗಿ ಮಾರ್ಕ್ ಮಾಡಿದ ಲೇನ್ ಗಳು ಶಿಸ್ತಿನ ಸಿಪಾಯಿಯಂತೆ ವಾಹನಗಳು ಸಾಗುತ್ತಿದ್ದವು.

ಸಫಾರಿ ವರ್ಲ್ಡ್ ಬ್ಯಾಂಕಾಕ್ ಸಿಟಿಯಲ್ಲಿದ್ದ ನಮ್ಮ ಹೋಟೆಲ್ ನಿಂದ ಸುಮಾರು ೪೦ಕಿಮೀ ದೂರದಲ್ಲಿತ್ತು. ಸುಮಾರು ೧:೩೦ ಗಂಟೆ ಪ್ರಯಾಣದ ನಂತರ ಸಫಾರಿ ವರ್ಲ್ಡ್ ಪಾರ್ಕಿಂಗ್ ಏರಿಯಾದಲ್ಲಿ ನಮ್ಮ ಫಾರ್ಚುನರ್ ಹೋಗಿ ನಿಂತಿತು.

ಡ್ರೈವರಿಣಿ ನಮ್ಮನ್ನು ಒಂದು ಗೈಡ್ ಬಳಿ ಒಯ್ದು ಪರಿಚಯಿಸಿ ಬಿಟ್ಟಳು.

ಗೈಡ್ ಟಿಕೆಟ್ ಎಲ್ಲ ರೆಡಿ ಮಾಡಿ ಇಟ್ಟಿದ್ದಳು! ಸುಮಾರು ೬೦ ವರ್ಷ ವಯಸ್ಸಿನ ಆಕೆ ಒಂದು ಹತ್ತು ಪ್ರವಾಸಿಗರ ಯಾರಿಗೆ ಯಾವ ಟಿಕೆಟ್ ಎಲ್ಲ ವಿವರ ನೋಟ್ ಬುಕ್ ಅಲ್ಲಿ ಬರೆದು ಕೊಂಡು ಅದರ ಪ್ರಕಾರ ನಮಗೆ ಗೈಡ್ ಮಾಡುತ್ತಿದ್ದಳು.

ಒಳಗೆ ಎಲ್ಲೆಲ್ಲಿ ಏನೇನನ್ನು ನೋಡಬೇಕು ಎಲ್ಲ ವಿವರಿಸಿ ನಮಗೆ ಟಿಕೆಟ್ ಕೊಟ್ಟಳು. ಕೊನೆಯ ಬರ್ಡ್ ಶೋ ಸ್ಕಿಪ್ ಮಾಡಿ ೩:೩೦ಗೆ ಬನ್ನಿ ಸಫಾರಿಗೆ ಹೋಗಬೇಕು ಎಂದು ಹೇಳಿದಳು. ಸರಿ ಎಂದು ತಲೆ ಅಲ್ಲಾಡಿಸಿ ನಾವು ಮರೀನ್ ಪಾರ್ಕ್ ಒಳಗೆ ಹೊರಟೆವು.

ಇಲ್ಲಿ ಮರೀನ್ ಪಾರ್ಕ್ ಹಾಗೂ ಸಫಾರಿ ಪಾರ್ಕ್ ಎಂಬ ಎರಡು ವಿಭಾಗ ಇವೆ. ಸಫಾರಿಯಲ್ಲಿ ನಾವು ಗಾಡಿಯಲ್ಲಿ ತೆರೆದ ಪ್ರಾಣಿ ಸಂಗ್ರಹಾಲಯದಲ್ಲಿ ಓಡಾಡಿ ಬರಬೇಕು. ಅದಕ್ಕೆ ೧ ಗಂಟೆ ಬೇಕು.

ಮರೀನ್ ಪಾರ್ಕ್ ಅಲ್ಲಿ ಶೋ ಗಳು, ಒಂದಿಷ್ಟು ಚಟುವಟಿಕೆಗಳು, ಪಂಜರದಲ್ಲಿರುವ ಪ್ರಾಣಿಗಳು/ಪಕ್ಷಿಗಳನ್ನು ನೋಡಬಹುದು. ಇದಕ್ಕೆ ಇಡೀ ದಿನ ಬೇಕು.

ಈ ಎರಡೂ ವಿಭಾಗ ಬೆಳಿಗ್ಗೆ ಒಂಬತ್ತರಿಂದ ನಾಲ್ಕುವರೆ ಸುಮಾರಿನವರೆಗೆ ತೆರೆದಿರುತ್ತದೆ. ಮರೀನ್ ಪಾರ್ಕ್ ಅಲ್ಲಿ ನಿಮಗೆ ಬೇಕಾದ ಶೋ ನೋಡಿ ನಡುವೆಯೇ ನೀವು ಊಟ ಹಾಗೂ ಸಫಾರಿ ವೀಕ್ಷಣೆ ನಡೆಸಬೇಕು. ಸರಿಯಾಗಿ ಪ್ಲಾನ್ ಮಾಡದಿದ್ದರೆ ಶೋ ಅಥವಾ ಸಫಾರಿ ಮಿಸ್ ಆಗುತ್ತೆ.

ಇಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಮುಂದಿನ ಶೋಗಳು ಇರುತ್ತವೆ. ಸಮಯದ ಬಗ್ಗೆ ಅಲ್ಲಿಯೇ ಮಾಹಿತಿ ಸಿಗುತ್ತೆ. ಈ ಸಫಾರಿ ವರ್ಲ್ಡ್ ತಾಣದಲ್ಲೂ ಆ ಮಾಹಿತಿ ಇರುತ್ತೆ.

ಶೋಗಳು

ಮರೀನ್ ಪಾರ್ಕ್ ಅಲ್ಲಿ ಈ ಮುಂದಿನ ಶೋಗಳು ಇರುತ್ತೆ. ಪ್ರತಿ ಶೋ ಕೇವಲ ೨೦ರಿಂದ ೩೦ ನಿಮಿಷ ಮಾತ್ರ. ಮೊದಲೇ ಹೋಗಿ ಕುಳಿತಿರುವದು ಉತ್ತಮ. ಅದರ ಟೈಮಿಂಗ್ ಬದಲಾಗ್ತಾ ಇರುತ್ತೆ. ಮೊದಲೇ ಟಿಕೆಟ್ ಅಲ್ಲಿರೋ ಟೈಮಿಂಗ್ ನೋಡಿಕೊಂಡು ಪ್ಲಾನ್ ಮಾಡಿ. ಕೌ ಬಾಯ್ ಸ್ಟಂಟ್ ಅಥವಾ ಸ್ಪೈ ವಾರ್ ಬಿಟ್ಟರೂ ಚಿಂತಿಲ್ಲ ಆದರೆ ಉಳಿದದ್ದನ್ನು ಮಿಸ್ ಮಾಡಬೇಡಿ.

  • ಓರಾಂಗ್ ಉಟಾನ್ ಶೋ
  • ಆನೆ ಶೋ
  • ಸೀ ಲಯನ್ (ಸಮುದ್ರ ಸಿಂಹ) ಶೋ
  • ಕೌ ಬಾಯ್ ಸ್ಟಂಟ್
  • ಡಾಲ್ಫಿನ್ ಶೋ
  • ಸ್ಪೈ ವಾರ್
  • ಬರ್ಡ್(ಹಕ್ಕಿ) ಶೋ
ಅಷ್ಟೇ ಅಲ್ಲ ಈ ಮುಂದಿನ ಚಟುವಟಿಕೆಗಳು ಸಹ ಇದೆ.
  • ಜಿರಾಫೆಗೆ ಆಹಾರ ತಿನ್ನಿಸುವದು
  • ನದಿ ಸಫಾರಿ
  • ಓರಾಂಗುಟನ್ ಜೊತೆ ಚಿತ್ರ ತೆಗೆದುಕೊಳ್ಳುವದು
  • ಕಾಂಗರೂ ಕ್ಯಾಂಪ್
  • ಮೊಟ್ಟೆ ಪ್ರಪಂಚ

ಇದಲ್ಲದೇ ಮುಖ್ಯವಾಗಿ ಸಫಾರಿಯಲ್ಲಿ ವಾಹನದಲ್ಲಿ ಹೋಗಿ ವಿವಿಧ ಪ್ರಾಣಿ ವೀಕ್ಷಣೆ. ಇದು ಅತ್ಯಂತ ಮನೋಹರ ಅನುಭವ. ಇದಕ್ಕೆ ನೀವು ಮರೀನ್ ಪಾರ್ಕ್ ನಿಂದ ಹೊರಬಂದು ನಿಗದಿತ ಗಾಡಿಯಲ್ಲಿ ಸಫಾರಿ ಜಾಗಕ್ಕೆ ಹೋಗಬೇಕು. 

ಒಂದೇ ಬೆಳಿಗ್ಗೆ ೯ಕ್ಕೆ ಸಫಾರಿಗೆ ಹೋಗಿ ಬರಬೇಕು ಇಲ್ಲವಾದರೆ ಕೊನೆಯ ಬರ್ಡ್ ಶೋ ಸ್ಕಿಪ್ ಮಾಡಿ ಸಫಾರಿಗೆ ಹೋಗಬೇಕು. ಆದರೆ ಯಾವ ಕಾರಣಕ್ಕೂ ಸಫಾರಿ ಮಿಸ್ ಮಾಡ ಬೇಡಿ. ಇದಕ್ಕೆ ಕಡಿಮೆ ಎಂದರೂ ೧ಗಂಟೆ ಬೇಕು.

ಬನ್ನಿ ಈ ಶೋ ಗಳ ಬಗ್ಗೆ ಚಟುವಟಿಕೆಗಳ ಬಗ್ಗೆ ವಿವರವಾಗಿ ತಿಳಿಯೋಣ.

ಬನ್ನೇರು ಘಟ್ಟ ನ್ಯಾಶನಲ್ ಪಾರ್ಕ್ ಹಲವು ಬಾರಿ ನೋಡಿ ಆಗಿದೆ. ಮೈಸೂರು ಝೂ ಹಾಗೂ ಬಂಡೀಪುರದಲ್ಲೂ ಪ್ರಾಣಿಗಳನ್ನು ಕೂಡಾ ನೋಡಿ ಆಯ್ತು. ಇನ್ನೇನಿರುತ್ತೆ ಮಹಾ ಎಂಬ ಉದಾಸೀನನಾಗಿದ್ದ ನನ್ನನ್ನು ಚಕಿತಗೊಳಿಸಿದ್ದು ಥೈಲ್ಯಾಂಡಿನ ಸಫಾರಿ ಪಾರ್ಕ್!

ಈ ಪಾರ್ಕ್ ಅಲ್ಲಿ ನನ್ನ ಪ್ರಕಾರ ನೀವು ಕುಳಿತುಕೊಳ್ಳುವದು ಈ ಶೋ ಗಳಲ್ಲಿ ಮಾತ್ರ. ಬೇರೆ ಎಲ್ಲ ಕಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾ ಇರಬೇಕು.

ಓರಾಂಗ್ ಉಟಾನ್ ಶೋ

ಆಗಲೇ ಹತ್ತು ಗಂಟೆ ಟಿಕೆಟ್ ಪ್ರಕಾರ ೧೦:೧೫ ಗೆ ಓರಾಂಗ್ ಉಟಾನ್ ಶೋ ಆರಂಭ. ಶೋ ಆರಂಭ ಆದ್ರೆ ೨೦ ನಿಮಿಷ ಮಾತ್ರ. ಮುಗಿದು ಹೋಗುತ್ತೆ. ಮತ್ತೆ ಆ ದಿನ ಆ ಶೋ ಇರಲ್ಲ. ಮ್ಯಾಪ್ ಅಲ್ಲಿ ಓರಾಂಗ್ ಉಟಾನ್ ಶೋ ನಡೆಯುವ ಜಾಗ ಮಾರ್ಕ್ ಮಾಡಿದ್ದರು. ಲಗುಬಗೆಯಿಂದ ಬೋರ್ಡ್ ನೋಡುತ್ತಾ ಶೋ ನಡೆಯುವ ಜಾಗಕ್ಕೆ ಹೋದೆವು. 

ಓರಾಂಗ್ ಉಟಾನ್ ಶೋ ಎಂಬ ಬೋರ್ಡ್ ಕಾಣಿಸಿತು. ಇಂಗ್ಲೀಷ್, ಥಾಯಿ ಹಾಗೂ ಚೈನೀಸ್ ಭಾಷೆಯಲ್ಲಿ ಬರೆದಿದ್ದರು. 5 ನಿಮಿಷ ಮೊದಲೇ ಜಾಗ ಹಿಡಿದು ಕುಳಿತೆವು.

ಕುಳಿತ ಸ್ವಲ್ಪ ಸಮಯದಲ್ಲಿ ಸರಿಯಾಗಿ ೧೦:೧೫ಕ್ಕೆ ಶೋ ಆರಂಭ ಆಯ್ತು. ಒಬ್ಬ ಕೇಸರಿ ಬಣ್ಣದ ಟಿಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಹಾಕಿಕೊಂಡು ಕೈಯಲ್ಲಿ ಮೈಕ್ ಹಿಡಿದುಕೊಂಡು ಬಂದ.

ಮೊದಲು ಥಾಯ್ ಹಾಗೂ ಇಂಗ್ಲೀಷ್ ಅಲ್ಲಿ ಸ್ವಾಗತ ಹೇಳಿ ತನ್ನ ನಿರೂಪಣೆ ಆರಂಭಿಸಿದ. ಅದು ಸಂಪೂರ್ಣ್ ಥಾಯ್ ಭಾಷೆಯಲ್ಲಿತ್ತು ಅನ್ಸುತ್ತೆ.

ಮೂರು ಓರಾಂಗ್ ಊಟಾನ್ ಗಳು ಪ್ರೇಕ್ಷಕರ ಗ್ಯಾಲರಿ ಹಿಂದಿನಿಂದ ಝಿಪ್ ಲೈನ್ ಮೂಲಕ ಕೈಯಲ್ಲಿ ಹಿಡಿದು ನೇತಾಡುತ್ತಾ ಸುಂಯ್ ಸುಂಯ್ ಎಂದು ವೇದಿಕೆಗೆ ಒಂದರ ನಂತರ ಇನ್ನೊಂದು ಬಂದವು. ನಿರೂಪಕ ಅವುಗಳನ್ನು ಪರಿಚಯಿಸಿದ. ಹಿಮ್ಮೇಳದಲ್ಲಿ ಅದಕ್ಕೆ ತಕ್ಕ ಕಾಮಿಡಿ ಮ್ಯೂಸಿಕ್ ಇತ್ತು. ರೆಕಾರ್ಡಡ್ ಆಗಿತ್ತೋ ಅಥವಾ ಅಡಗಿಕೊಂಡು ಭಾರಿಸುತ್ತಾ ಇದ್ದರೋ ಗೊತ್ತಿಲ್ಲ!

ನಿರೂಪಕ ಓರಾಂಗ್ ಊಟಾನ್ ಜೊತೆ ಚೇಷ್ಟೆ ಮಾಡಿದ. ಹೊಡೆದ ಹಾಗೆ, ಬಿದ್ದ ಹಾಗೆ ,ಸತ್ತ ಹಾಗೆ ನಾಟಕ ಚೆನ್ನಾಗಿ ಓರಾಂಘ್ ಊಟಾನ್ ಗಳು ನಟಿಸಿದವು.

ಆಮೇಲೆ ಪುಟ್ಟ ಆರ್ಕೆಸ್ಟ್ರಾ ಇತ್ತು. ಡ್ರಮ್ ಬಾರಿಸಿದ ಹಾಗೆ, ಗಿಟಾರ್ ಹಿಡಿದು ನುಡಿಸಿದ ಹಾಗೆ ನಟಿಸಿದವು.

ಆಮೇಲೆ ಒಂದು ಓರಾಂಗ್ ಉಟಾನ್ ಬಾಕ್ಸಿಂಗ್ ಸ್ಪರ್ಧೆ ಇತ್ತು. ಮಧ್ಯೆ ಮಧ್ಯೆ ಒಂದಿಷ್ಟು ಕಾಮಿಡಿ ಒಟ್ಟಿನಲ್ಲಿ ಖುಷಿ ಕೊಡುವ ಶೋ ಇದು.

ಪಕ್ಕದಲ್ಲೇ ಒಂದು ಗಾಡಿಯಲ್ಲಿ ಓರಾಂಗ್ ಉಟಾನ್ ಕುಳಿತು ಗಂಟೆ ಬಾರಿಸುತ್ತಿತ್ತು. ಬಾಕ್ಸಿಂಗ್ ಅಲ್ಲಿ ಏಟಾದ ಹಾಗೆ ನಾಟಕ ಮಾಡುವದು, ಇನ್ನೊಂದು ಓರಾಂಗ್ ಉಟಾನ್ ಡಾಕ್ಟರ್ ವೇಷದಲ್ಲಿ ಬರುವದು, ಇನ್ನೆರಡೂ ಓರಾಂಗ್ ಉಟಾನ್ ಸ್ಟ್ರೆಚರ್ ಹಿಡಿದು ಬರುವದು. ಅಲ್ಲೇ ಮಧ್ಯೆ ಬಿದ್ದ ಹಾಗೆ ನಟನೆ, ಮುಖ ಭಾವನೆ ನೋಡಿದಾಗ ಇವೆಲ್ಲ ಮನುಷ್ಯರೇನೋ ಅನ್ನಿಸುವಷ್ಟು ನೈಜ ಅನ್ನಿಸಿ ಬಿಡುತ್ತದೆ.

ಸುಮಾರು ಇಪ್ಪತ್ತು ನಿಮಿಷ ಒಂದು ರೀತಿಯಲ್ಲಿ ಬೇರೆಯದೇ ಲೋಕಕ್ಕೆ ನಿಮ್ಮನ್ನು ಒಯ್ಯುತ್ತದೆ!.



ಮೂಲತಃ ಓರಾಂಗ್ ಉಟಾನ್ ಕಾಡು ಪ್ರಾಣಿ. ಇವಕ್ಕೆ ಟ್ರೇನಿಂಗ್ ನೀಡಿ ಅವುಗಳಿಂದ ನಟನೆ ತೆಗೆಸುವದು ಸುಲಭದ ಮಾತಲ್ಲ. ಯಾಕೆಂದರೆ ಪೇಟಾದಂತಹ ಎನ್ ಜಿ ಓ ಗಳು ಇವುಗಳನ್ನು ವಿರೋಧಿಸುತ್ತವೆ. ಬಹುಶಃ ಥಾಯ್ಲೆಂಡ್ ಅಲ್ಲಿ ಪೇಟಾಕ್ಕೆ ಟಾಟಾ ಹೇಳಿರಬೇಕು!

ಮೊಟ್ಟೆ ಪ್ರಪಂಚ

ಇದನ್ನು ಮುಗಿಸಿ ಪಕ್ಕದಲ್ಲೇ ಎಗ್ಸ್ ವರ್ಲ್ಡ್ ಅಂದ್ರೆ ಮೊಟ್ಟೆಗಳ ಪ್ರಪಂಚ ಇತ್ತು. ಅಲ್ಲಿ ಬೇರೆ ಬೇರೆ ಪಕ್ಷಿಗಳ ಮೊಟ್ಟೆ ಹಾಗೂ ಮೊಟ್ಟೆಯ ವಿವಿಧ ಹಂತಗಳ ಚಿತ್ರ ಸಹಿತ ವಿವರ ಇತ್ತು.

ಪಂಚರಂಗಿ ಗಿಣಿಯನ್ನು ಮಶೀನ್ ಬಳಸಿ ಅವುಗಳ ಮೊಟ್ಟೆಗೆ ಕಾವು ಕೊಟ್ಟು ಬೆಳೆಸುತ್ತಿದ್ದರು. ಬೇರೆ ಬೇರೆ ವಯಸ್ಸಿನ ಗಿಣಿಯನ್ನು ಅಲ್ಲಿಟ್ಟು ಎಷ್ಟು ತಿಂಗಳಾಗಿದೆ ಎಂಬುದನ್ನು ಬರೆದಿದ್ದರು. ಕೋಳಿಯ ಹೊಟ್ಟೆಯಲ್ಲಿ ಮೊಟ್ಟೆ ಬೆಳೆಯುವದು ಹೇಗೆ ಎಂಬ ಚಿತ್ರಗಳಿದ್ದವು. ಒಟ್ಟಿನಲ್ಲಿ ಕಲಿಯುವಿಕೆಗೆ ಉತ್ತಮ ಮಾರ್ಗ.

ಹಾಗೆಯೇ ಆನೆಯ ಶೋ ಸಮಯ ಹತ್ತಿರ ಬಂತು. ದಾರಿಯಲ್ಲಿ ಹಲವು ಬೋನಿನಲ್ಲಿರುವ ಪ್ರಾಣೀ / ಪಕ್ಷಿ ನೋಡುತ್ತಾ ಸಾಗಿದೆವು. ಒಂದು ಕಡೆ ಓರಾಂಗ್ ಉಟಾನ್ ಜೊತೆ ಫೋಟೋ ತೆಗೆಯುವ ಅವಕಾಶ ಇತ್ತು. ನೆನಪಿಡಿ ಅಲ್ಲೇ ತಕ್ಷಣ ಫೋಟೋ ತೆಗೆಸಿಕೊಂಡರೆ ಉತ್ತಮ. ಮತ್ತೆ ನಿಮಗೆ ಅಲ್ಲಿಗೆ ಬರಲು ಸಮಯ ಇರುವದಿಲ್ಲ. ಎಲ್ಲೂ ನಿಲ್ಲ ಬೇಡಿ. ಟಾಯ್ಲೆಟ್ ಬೋರ್ಡ್ ಕಂಡ ತಕ್ಷಣ ಹೋಗಿ ಹಗುರಾಗುವದು ಉತ್ತಮ. ಇಲ್ಲಾಂದ್ರೆ ಶೋ ಮಧ್ಯೆ ಓಡಿ ಹೋಗಬೇಕು!

ಮುಂದಿನ ಭಾಗದಲ್ಲಿ ಉಳಿದ ವಿಶೇಷಗಳ ಬಗ್ಗೆ ಹಾಗೂ ಶೋ ಬಗ್ಗೆ ತಿಳಿಯೋಣ. ಧನ್ಯವಾದಗಳು.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ