ಇಂಡಿಯಾದಿಂದ ಥಾಯ್ಲೆಂಡ್ ಗೆ ನೀವು ಪ್ರವಾಸಕ್ಕೆ ಹೋಗುವ ವಿಚಾರ ಮಾಡುತ್ತಾ ಇದ್ದೀರಾ? ಹಾಗಿದ್ದರೆ ಈ ಲೇಖನ ಸರಣಿ ತಪ್ಪದೇ ಕೊನೆಯವರೆಗೆ ಓದಿ.
ಯಾವುದೇ ಬೇರೆ ದೇಶಕ್ಕೆ ಹೋಗುವಾಗ ಈ ಮುಂದಿನವು ಬೇಕೆ ಬೇಕು.
- ನಮ್ಮ ದೇಶದ ಪಾಸ್ ಪೋರ್ಟ್
- ಹೋಗಲು / ಬರಲು ವಿಮಾನ ಪ್ರಯಾಣದ ಟಿಕೆಟ್
- ಅಷ್ಟೂ ದಿನಕ್ಕೆ ಹೋಟೆಲ್ / ಅಪಾರ್ಟ್ಮೆಂಟ್ ಬುಕಿಂಗ್. ಅಥವಾ ಉಳಿಯುವ ವ್ಯವಸ್ಥೆ. ನೆಂಟರ ಮನೆ / ಹೋಂ ಸ್ಟೇ ಆದರೆ ಅದರ ಪೂರ್ತಿ ವಿಳಾಸ.
- ಹೋಗಲಿರುವ ದೇಶದ ಆ ಕಾರ್ಯಕ್ಕೆ ಅನುಮತಿ ಇರುವ ವೀಸಾ (ಟೂರಿಸ್ಟ್ / ಬ್ಯುಸಿನೆಸ್)
- ಕೆಲಸ ಮಾಡಲು ಹೋಗುತ್ತಿದ್ದರೆ ವರ್ಕ್ ಪರ್ಮಿಟ್ (ಕೆಲಸಕ್ಕೆ ಅನುಮತಿ ಪತ್ರ) ಬರಿ ಟೂರಿಸ್ಟ್ ಆಗಿದ್ದರೆ ಇದು ಬೇಡ.
- ಆ ದೇಶದ ಹಣ ನಗದು ಹಾಗೂ ಫೊರೆಕ್ಸ್ ಕಾರ್ಡ್ ರೂಪದಲ್ಲಿ (ಎರಡರಲ್ಲೂ)
- ಇರುವಷ್ಟು ದಿನಕ್ಕೆ ಕೆಲಸ ಮಾಡುವ ಮೊಬೈಲ್ ಸಿಮ್ ಕಾರ್ಡ್
- ಅಂತರಾಷ್ಟ್ರೀಯ ಪ್ರವಾಸ ವಿಮೆ
ಥಾಯ್ಲೆಂಡ್ ಪ್ರವಾಸಕ್ಕೆ ಏನೇನು ಮುಖ್ಯವಾಗಿ ಬೇಕು?
೧. ಪಾಸ್ ಪೋರ್ಟ್
ಯಾವುದೇ ಬೇರೆ ದೇಶಕ್ಕೆ ಹೋಗಲು ಪಾಸ್ ಪೋರ್ಟ್ ಬೇಕೇ ಬೇಕು. ಅದಿಲ್ಲದೇ ಇಲ್ಲಿಂದ ಇಂಟರ್ನ್ ನ್ಯಾಶನಲ್ ವಿಮಾನಕ್ಕೆ ನಿಮ್ಮನ್ನು ಹತ್ತಲು ಬಿಡುವದಿಲ್ಲ. ಥಾಯ್ಲೆಂಡ್ ಕೂಡಾ ಬೇರೆ ದೇಶ ಅಲ್ವಾ.
ನಿಮ್ಮ ಹಾಗೂ ನಿಮ್ಮ ಜೊತೆ ಬರಲಿರುವ ಎಲ್ಲರ ಪಾಸ್ ಪೋರ್ಟ್ ತೆಗೆದು ಎಕ್ಸ್ಪೈರಿ ದಿನಾಂಕ ಒಮ್ಮೆ ಪರಿಶೀಲಿಸಿ. ಅಕಸ್ಮಾತ್ ನೀವು ಹೊರಡುವ ದಿನ ಕರೆಕ್ಟ್ ಆಗಿ ೬ ತಿಂಗಳು ಸಮಯ ಇರುವ ಹಾಗಿದ್ದರೆ ಪಾಸ್ ಪೋರ್ಟ್ ನವೀಕರಣ ಮಾಡುವದು ಉತ್ತಮ. ಯಾಕೆಂದರೆ ಪ್ರಯಾಣದ ದಿನ ಯಾವುದೋ ಕಾರಣಕ್ಕೆ ಒಂದೆರಡು ದಿನ ಅಥವಾ ವಾರ ಮುಂದೂಡಲು ಅನುಕೂಲ ಆಗುತ್ತದೆ.
ಚಿಕ್ಕ ಹಸುಳೆಯಿಂದ ಹಿಡಿದು ಬಾಲಕ, ಬಾಲಕಿಯವರೆಗೆ ಎಲ್ಲ ವಯಸ್ಸಿನವರಿಗೂ ಪಾಸ್ ಪೋರ್ಟ್ ಬೇಕೆ ಬೇಕು. ನಿಮ್ಮ ಜೊತೆ ಬರುತ್ತಿರುವ ಮಕ್ಕಳಿಗೆ ಪಾಸ್ ಪೋರ್ಟ್ ಇದೆ ಎಂದು ಪರಿಶೀಲಿಸಿ.
ಭಾರತದ ಪಾಸ್ ಪೋರ್ಟ್ ಅನ್ನು ನೀವು ಈ ಪಾಸ್ ಪೋರ್ಟ್ ಸೇವಾ ವೆಬ್ ತಾಣದ ಸಹಾಯದ ಮೂಲಕ ಪಡೆಯಬಹುದು.
ಮತ್ತೊಮ್ಮೆ ಹೇಳುತ್ತಿದ್ದೇನೆ ನೀವು ವಿಮಾನ ಹತ್ತುವ ಸಮಯದಲ್ಲಿ ಪಾಸ್ ಪೋರ್ಟ್ ಕನಿಷ್ಟ ೬ ತಿಂಗಳ ವ್ಯಾಲಿಡಿಟಿ ಇರದಿದ್ದರೆ ನೀವು ಪ್ರಯಾಣ ಮಾಡಲಾಗದು. ಹಾಗೆಯೇ ಏರ್ ಪೋರ್ಟ್ ನಿಂದ ಮನೆಗೆ ವಾಪಸ್ ಬರಬೇಕಾಗುತ್ತದೆ.
೨. ವಿಮಾನದ ಟಿಕೆಟ್
ಥಾಯ್ಲೆಂಡ್ ಗೆ ಪ್ರವೇಶ ಮಾಡಲು ಹೋಗಲು ಹಾಗೂ ಬರುವ ವಿಮಾನ ಟಿಕೆಟ್ ಎರಡು ಕೂಡಾ ಬೇಕು. ನೆನಪಿಡಿ ಯಾವುದೇ ದೇಶ ನೀವು ಅಲ್ಲಿನ ಪ್ರಜೆ(ಸಿಟಿಜನ್) ಅಲ್ಲದಿದ್ದರೇ ರಿಟರ್ನ್ ಟಿಕೆಟ್ ಇಲ್ಲದೇ ಪ್ರವೇಶ ನೀಡುವದಿಲ್ಲ.
ವಿಮಾನ ಬುಕಿಂಗ್ ಮಾಡುವಾಗ ಗಮನದಲ್ಲಿಡಿ ನೀವು ವಿಮಾನ ಬುಕಿಂಗ್ ಗೆ ನೀಡುವ ವಿವರ ನಿಮ್ಮ ಪಾಸ್ ಪೋರ್ಟ್ ಜೊತೆ ಅಕ್ಷರಶಃ ಹೊಂದಾಣಿಕೆ ಆಗಬೇಕು. ಪಾಸ್ ಪೋರ್ಟ್ ಅಥವಾ ಅದರ ಕಾಪಿ ಎದುರಲ್ಲಿ ಇಟ್ಟುಕೊಂಡು ವಿಮಾನ ಬುಕಿಂಗ್ ಮಾಡಿ. ಹೆಸರು, ಜನ್ಮದಿನಾಂಕ ಇತ್ಯಾದಿ ಸ್ಪೆಲ್ಲಿಂಗ್ ಮಿಸ್ಟೇಕ್ ಇಲ್ಲದೇ ಅದೇ ಹೆಸರಲ್ಲಿ ಬುಕಿಂಗ್ ಮಾಡಿ.
ನೀವು ಮೇಕ್ ಮೈ ಟ್ರಿಪ್, ಯಾತ್ರಾ ಇತ್ಯಾದಿ ವೆಬ್ ತಾಣದಿಂದ ಬುಕಿಂಗ್ ಮಾಡಬಹುದು.
ಹೆಚ್ಚಿನ ಅಂತರಾಷ್ಟ್ರೀಯ ವಿಮಾನ ಮಧ್ಯ ರಾತ್ರಿ ಇರುತ್ತದೆ. ಯಾವ ದಿನಾಂಕ ರಾತ್ರಿಯೋ ಬೆಳಿಗ್ಗೆ ಎಲ್ಲ ಒಮ್ಮೆ ನೋಡಿ ಚೆಕ್ ಮಾಡಿ ಫೈನಲ್ ಬುಕಿಂಗ್ ಮಾಡಿ. ಬುಕಿಂಗ್ ಮಾಡುವಾಗ ಅವಸರ ಮಾಡುವದು ತರವಲ್ಲ. ಒಮ್ಮೆ ಬುಕಿಂಗ್ ಆದಮೇಲೆ ಬದಲಾಯಿಸಲು ಅನವಶ್ಯಕ ವೆಚ್ಚ ಆಗುತ್ತದೆ.
೩. ಉಳಿಯಲು ವ್ಯವಸ್ಥೆ
ಥೈಲ್ಯಾಂಡ್ ಅಲ್ಲಿ ಇರುವಷ್ಟು ದಿನ ಉಳಿಯಲು ವ್ಯವಸ್ಥೆ ಕೂಡಾ ಇಲ್ಲಿಂದಲೇ ಮಾಡಬೇಕು. ನಿಮ್ಮ ನೆಂಟರ ಮನೆ ಇದ್ದರೆ ಸರಿ. ಅವರ ಜೊತೆ ಮಾತನಾಡಿ, ವಿಳಾಸ, ಜಾಗ ಎಲ್ಲ ಪಡೆಯಿರಿ.
ಇಲ್ಲಾಂದ್ರೆ ಅಷ್ಟು ಹೋಟೆಲ್ ಬುಕಿಂಗ್ ಮಾಡಲೇ ಬೇಕು. ನಿಮಗೆ ಬೇಕಾದ ವ್ಯವಸ್ಥೆ ಇದೆ ಖಚಿತ ಮಾಡಿಕೊಂಡು ಬುಕಿಂಗ್ ಮಾಡಿ.
ನೀವು ಮೇಕ್ ಮೈ ಟ್ರಿಪ್, ಯಾತ್ರಾ ಇತ್ಯಾದಿ ವೆಬ್ ತಾಣದಿಂದ ಹೋಟೆಲ್ ಬುಕಿಂಗ್ ಮಾಡಬಹುದು.
ನೀವು ಏರ್ ಬಿಎನ್ ಬಿ ಅಂತಹ ತಾಣ ಬಳಸಿ ಹೋಂಸ್ಟೇ, ಅಪಾರ್ಟ್ ಮೆಂಟ್ ಕೂಡಾ ಬುಕ್ ಮಾಡಬಹುದು. ಆಗ ಕಡಿಮೆ ದರದಲ್ಲಿ ಉಳಿಯುವ ವ್ಯವಸ್ಥೆ ಆದೀತು. ಆದರೆ ಸ್ಟಾರ್ ಹೋಟೆಲ್ ಸೌಲಭ್ಯ, ಸಿಟಿಗೆ ಹತ್ತಿರ ಇಲ್ಲದಿರಬಹುದು. ನೋಡಿಕೊಂಡು ಬುಕ್ ಮಾಡಿ.
ಹೊಟೆಲ್ ಅಥವಾ ಹೋಂ ಸ್ಟೇ ಬುಕಿಂಗ್ ಮಾಡುವಾಗ ಸಿಟಿಯ ಒಳಗೇ ಇದ್ದರೆ ಉತ್ತಮ. ನಿಮಗೆ ಲಾಂಡ್ರಿ, ಭಾರತೀಯ ಊಟ, ಬಸ್, ಮೆಟ್ರೋ, ಆಟೋ ಹೀಗೆ ಎಲ್ಲ ಸೌಲಭ್ಯ ಕೈಗೆ ಎಟುಕುವಂತೆ ಇರುತ್ತದೆ. ಥಾಯ್ಲೆಂಡ್ ನ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಚಡ್ಡಿ ಲಾಂಡ್ರಿಯಲ್ಲಿ ತೊಳೆಯುವ ಬೆಲೆಗೆ ಹೆಚ್ಚು ಕಡಿಮೆ ನಾವಿಲ್ಲಿ ಹೊಸ ಚಡ್ಡಿ ಅಂಗಡಿಯಲ್ಲಿ ಖರೀದಿ ಮಾಡಬಹುದು!
ಹೋಟೆಲ್ ಒಳಗಿನ ಲಾಂಡ್ರಿ ಸೇವೆಗಿಂತ ಹೊರಗಡೆಯ ಸೆಲ್ಪ್ ಸರ್ವೀಸ್ ಲಾಂಡ್ರಿ ಉತ್ತಮ. ಥಾಯ್ಲೆಂಡ್ ಪಟ್ಟಾಯಾದಲ್ಲಿ ಹೊರಗಡೆ ಹೋದರೆ ಸುಮಾರು ೯೦ ಭಾಟ್ ( ಸುಮಾರು ೨೧೦ ರೂ) ಬೆಲೆಗೆ ಹತ್ತು ಕೆಜಿ ಬಟ್ಟೆ ಮಶೀನ್ ಅಲ್ಲಿ ತೊಳೆದು ಡ್ರೈಯರ್ ಅಲ್ಲಿ ಒಣಗಿಸಿಕೊಂಡು ಬರಬಹುದು! ಇದಕ್ಕೆ ಬ್ಯಾಂಕಾಕ್ ಸಿಟಿ ಅಲ್ಲಿ ೧೩೦ ಭಾಟ್ (ಸುಮಾರು ೩೦೫ರೂ) ಆಗುತ್ತದೆ.
೪. ಥಾಯ್ಲೆಂಡ್ ಟೂರಿಸ್ಟ್ ವಿಸಾ
ಥಾಯ್ಲೆಂಡ್ ಪ್ರವಾಸಕ್ಕೆ ಟೂರಿಸ್ಟ್ ವಿಸಾ ಬೇಕು. ನೀವು ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದರೆ ನಾನ್ ಇಮ್ಮಿಗ್ರಿಶನ್ ವಿಸಾ ಹಾಗೂ ವರ್ಕ್ ಪರ್ಮಿಟ್ ಬೇಕು. ಅದಕ್ಕೆ ನಿಮಗೆ ಕೆಲಸ ಕೊಡುತ್ತಿರುವ ಕಂಪನಿಗಳೇ ಸಹಾಯ ಮಾಡುತ್ತವೆ.
ನೀವು ಬೆಂಗಳೂರಿನಲ್ಲಿಯೇ ಥಾಯ್ಲೆಂಡ್ ವಿಸಾ ಗೆ ಅರ್ಜಿ ಹಾಕಿ ಟೂರಿಸ್ಟ್ ವೀಸಾ ಪಡೆಯಬಹುದು. ಅಥವಾ ಥಾಯ್ಲೆಂಡ್ ನ ಬ್ಯಾಂಕಾಕ್ ಏರ್ ಪೋರ್ಟ್ ಅಲ್ಲಿಯೇ ವೀಸಾ ಆನ್ ಎರೈವಲ್ ಮೂಲಕ ವೀಸಾ ಪಡೆಯಬಹುದು.
ಬೆಂಗಳೂರಿನಲ್ಲಿ ಥಾಯ್ಲೆಂಡ್ ವೀಸಾಗೆ ಅರ್ಜಿ ಹಾಕಲು ವಿಎಫ್ ಎಸ್ ಗ್ಲೋಬಲ್ ನ ಈ ವೆಬ್ ತಾಣಕ್ಕೆ ಭೇಟಿ ಕೊಡಿ. ಹೆಚ್ಚು ಕಡಿಮೆ ವೀಸಾ ಆನ್ ಅರೈವಲ್ ನ ಅರ್ಧ ಬೆಲೆಗೆ ಇಲ್ಲಿ ವೀಸಾ ಪಡೆಯಬಹುದು. ಆದರೆ ಸಮಯ ಜಾಸ್ತಿ (೫ ರಿಂದ ಹತ್ತು ದಿನ) ಬೇಕು. ಆದರೆ ತುಂಬಾ ಜನ ಹೋಗುತ್ತಿದ್ದರೆ ನೀವು ಬೆಂಗಳೂರಿನಲ್ಲಿದ್ದರೆ ಹಾಗೂ ಸಮಯ ಇದ್ದರೆ ಮೊದಲೇ ಪ್ಲ್ಯಾನ್ ಮಾಡಿ ಈ ಮಾರ್ಗದಲ್ಲೇ ವೀಸಾ ಪಡೆಯಿರಿ.
ವೀಸಾ ಆನ್ ಅರೈವಲ್ ಗೆ ಬ್ಯಾಂಕಾಕ್ ಏರ್ ಪೋರ್ಟ್ ಅಲ್ಲಿ ಹೋಗಿ ಅರ್ಜಿ ಹಾಕಬಹುದು. ಅಲ್ಲಿ ಕೂಡಾ ಫಾಸ್ಟ್ ಟ್ರ್ಯಾಕ್ ಹಾಗೂ ಸಾಧಾರಣ ಕ್ಯೂ ಇದೆ. ೨೦೨೨ರಲ್ಲಿ ಫಾಸ್ಟ್ ಟ್ರ್ಯಾಕ್ ಗೆ ಒಬ್ಬರಿಗೆ ೨೨೦೦ ಭಾಟ್ ( ೫೨೦೦ ರೂ) ಹಾಗೂ ಸಾಧಾರಣ ಕ್ಯೂ ಅಲ್ಲಿ ಒಬ್ಬರಿಗೆ ೨೦೦೦ ಭಾಟ್ ( ೪೭೦೦ರೂ) ಚಾರ್ಜ್ ಮಾಡುತ್ತಾರೆ. ನೆನಪಿಡಿ ನೀವು ಈ ಭಾಟ್ ಹಣವನ್ನು ಕ್ಯಾಶ್ ರೂಪದಲ್ಲೇ ನೀಡಬೇಕು.
ವೀಸಾ ಗೆ ಫೋಟೋ ೬೦ಮಿಮಿ * ೪೦ಮಿಮಿ ಗಾತ್ರದ ೭೦% ಮುಖ ಇರುವ ಭಾವಚಿತ್ರ ಬೇಕು. ಪಾಸ್ ಪೋರ್ಟ್ ಫೋಟೋ ಆಗದು. ಥಾಯ್ ವೀಸಾಗೆ ಬೇಕಾಗುವ ಫೋಟೋ ವಿವರಗಳಿಗೆ ಈ ವೆಬ್ ತಾಣ ನೋಡಿ. ನೆನಪಿಡಿ ನೀವು ಭಾರತದಲ್ಲಿ ಫೋಟೋ ಈ ಗಾತ್ರದಲ್ಲಿ ಮಾಡಿಸಿ ಒಯ್ಯದಿದ್ದರೆ ಬ್ಯಾಕಾಂಕ್ ಏರ್ ಪೋರ್ಟ್ ಅಲ್ಲಿ ಸುಮಾರು ೨೫೦ ಭಾಟ್ (೫೯೦ರೂ ೨ಫೋಟೋಗೆ) ಕೊಟ್ಟು ಒಬ್ಬರ ಫೋಟೋ ತೆಗೆಸುವ ಭಾಗ್ಯ ನಿಮ್ಮದಾಗುತ್ತದೆ!
ವೀಸಾ ಆನ್ ಅರೈವಲ್ ಗೆ ಇನ್ನೊಂದು ನಿಯಮ ಇದೆ. ನಿಮ್ಮ ಬಳಿ ಒಬ್ಬರಿಗೆ ೧೦ ಸಾವಿರ ಭಾಟ್ ಕ್ಯಾಶ್ ಇರಲೇ ಬೇಕು! ಒಂದು ಕುಟುಂಬಕ್ಕೆ ೨೦ ಸಾವಿರ ಭಾಟ್ ಲೆಕ್ಕಾಚಾರದಲ್ಲಿ ಹಣ ತೋರಿಸಬೇಕು. ಒಂದಕ್ಕಿಂತ ಹೆಚ್ಚು ಕುಟುಂಬ ಇದ್ದರೆ ಪ್ರತಿ ಕುಟುಂಬಕ್ಕೆ ೨೦ ಸಾವಿರ ಭಾಟ್ ನೋಟುಗಳನ್ನು ವೀಸಾ ಆಫೀಸರಿಗೆ ತೋರಿಸ ಬೇಕು.
ಅಕಸ್ಮಾತ್ ನೀವು ಈ ಹಣ ಇಲ್ಲಿಂದ ಒಯ್ಯದಿದ್ದರೆ ದುಬಾರಿ ಕಮಿಶನ್ ಹಾಗೂ ಫಾರೆಕ್ಸ್ ಬೆಲೆಗೆ ಭಾಟ್ ಖರೀದಿಸಬೇಕು. ಫಾರೆಕ್ಸ್ ಖರೀದಿಸಲು ನಿಮ್ಮ ಅಕೌಂಟ್ ಅಲ್ಲಿ ಹಣ ಇಲ್ಲದಿದ್ದರೆ ಅಥವಾ ಸಮಸ್ಯೆ ಕಾಣಿಸಿಕೊಂಡರೆ ಹಾಗೆಯೇ ಏರ್ ಪೋರ್ಟ್ನಿಂದಲೇ ನಿಮ್ಮನ್ನು ಮೂಲ ದೇಶಕ್ಕೆ ವಾಪಸ್ ಕಳುಹಿಸುತ್ತಾರೆ! ದುಡ್ಡೇ ದೊಡ್ಡಪ್ಪ ಎಂದು ಸುಮ್ಮನೆ ಹೇಳುತ್ತಾರೆಯೇ?
೨೦ ಸಾವಿರ ಭಾಟ್ (೪೭ ಸಾವಿರ ರೂ) ದೊಡ್ಡ ಅಮೌಂಟ್ ಎನ್ನಿಸಬಹುದು. ಆದರೆ ನಾಲ್ಕು ಜನ ಇದ್ದರೆ, ನೀವು ಎಲ್ಲಿಯೂ ಎಂಟ್ರಾನ್ಸ್ ಟಿಕೆಟ್ ಬುಕ್ ಮಾಡಿರದಿದ್ದರೆ ಈ ಹಣ ಟಿಕೆಟ್, ಊಟ, ತಿಂಡಿಗೆ ಬಳಕೆ ಆಗಿ ಕರಗಲು ಜಾಸ್ತಿ ದಿನ ಬೇಕಿಲ್ಲ. ನೀವು ಕ್ಯಾಬ್ ಎಲ್ಲ ಬುಕ್ ಮಾಡಿರದಿದ್ದರೆ ಈ ಹಣ ಕಡಿಮೆ ಆದರೂ ಆಶ್ಚರ್ಯ ಇಲ್ಲ.
ಚಿಂತಿಸಬೇಡಿ ಮುಂಬರುವ ಭಾಗದಲ್ಲಿ ಥೈಲ್ಯಾಂಡ್ ಅಲ್ಲಿ ಹಣ ಉಳಿಸುವ ಹಲವು ಮಾರ್ಗಗಳನ್ನು ನಿಮಗೆ ತಿಳಿಸುತ್ತೇನೆ.
೫. ಫಾರೆಕ್ಸ್ ಹಣ ಹಾಗೂ ಕಾರ್ಡ್
ಥಾಯ್ಲೆಂಡ್ ಅಲ್ಲಿ ದೇವಸ್ಥಾನ, ನ್ಯಾಶನಲ್ ಪಾರ್ಕ್, ಝೂ, ಐಲ್ಯಾಂಡ್ ಎಲ್ಲ ಕಡೆ ಹೋಗಲು ಕ್ಯಾಬ್, ಮೆಟ್ರೋ, ಬಸ್, ಎಂಟ್ರಾನ್ಸ್ ಫೀ ಗೆ ಹಣ ಬೇಕೆ ಬೇಕು. ಅದೂ ಥೈಲ್ಯಾಂಡ್ ಕರೆನ್ಸಿ ಆದ ಭಾಟ್ ರೂಪದಲ್ಲಿ. ನೀವು ಅಲ್ಲಿಯೂ ರುಪಾಯಿಯನ್ನು ಭಾಟ್ ಗೆ ಬದಲಾಯಿಸಬಹುದು. ಆದರೆ ದುಬಾರಿ. ಏರ್ ಪೋರ್ಟ್ ಅಲ್ಲಿ ಮಾಡಿಸಿದರಂತೂ ಕಥೆ ಮುಗಿಯಿತು! ಭಾರತದಲ್ಲೇ ಭಾಟ್ ಪರಿವರ್ತಿಸಿ ಒಯ್ಯುವದು ಜಾಣತನ.
ನಾನು ಮೇಲೆ ತಿಳಿಸಿದಂತೆ ಕಡಿಮೆ ಎಂದರೂ ೧೦ ಸಾವಿರ ಭಾಟ್ ಒಬ್ಬರಿಗೆ, ೨೦ ಸಾವಿರ ಭಾಟ್ ಒಂದು ಕುಟುಂಬಕ್ಕೆ ಕ್ಯಾಶ್ ಒಯ್ಯಲೇ ಬೇಕು. ಅಷ್ಟೇ ಹಣ ಫಾರೆಕ್ಸ್ ಕಾರ್ಡ್ ರೂಪದಲ್ಲಿ ಒಯ್ಯುವದು ಒಳ್ಳೆಯದು. ನಾನು ತಿಳಿಸಿದಂತೆ ಥೈಲ್ಯಾಂಡ್ ಅಲ್ಲಿ ಹಣ ನೀವಿದ್ದಷ್ಟು ದಿನ ನೀರಿನಂತೆ ಖರ್ಚಾಗುತ್ತದೆ!
ನೀವು ವಾಪಸ್ ಬಂದ ಮೇಲೆ ಭಾಟ್ ನೋಟುಗಳನ್ನು ಹಾಗೂ ಫಾರೆಕ್ಸ್ ಕಾರ್ಡ್ ಅನ್ನು ಮತ್ತೆ ರೂಪಾಯಿಗೆ ಬದಲಾಯಿಸಬಹುದು. ಅದಕ್ಕೆ ಮತ್ತೆ ಕಮಿಶನ್ ಕೊಡಬೇಕು.
ನೆನಪಿಡಿ ಭಾರತದ ಹಾಗೆ ಅಲ್ಲಿ ಚಿಕ್ಕ ವ್ಯಾಪಾರಿಗಳು ಫೋನ್ಪೇ, ಪೇಟಿಎಂ, ಫಾರೆಕ್ಸ್ ಕಾರ್ಡ್ ಸ್ವೀಕರಿಸುವದಿಲ್ಲ. ಕ್ಯಾಶ್ ಕೊಡಲೇ ಬೇಕು. ಅದಕ್ಕೆ ಎಲ್ಲೆಲ್ಲಿ ಫಾರೆಕ್ಸ್ ಕಾರ್ಡ್ ಸ್ವೀಕರಿಸುತ್ತಾರೋ ಅಲ್ಲೆಲ್ಲ ಅದನ್ನೇ ಬಳಸುವದು ಒಳ್ಳೆಯದು.
ವೀಸಾ ಆನ್ ಎರೈವಲ್ ಗೆ ಕೂಡಾ ಕ್ಯಾಶ್ ಬೇಕು. ಇಲ್ಲಿ ವೀಸಾ ಮಾಡಿಸದಿದ್ದರೆ ಪ್ರತಿ ಒಬ್ಬರಿಗೆ ೨೨೦೦ ಭಾಟ್ ಲೆಕ್ಕಾಚಾರದಲ್ಲಿ ಎಕ್ಸ್ಟ್ರಾ ಕ್ಯಾಶ್ ವೀಸಾಗಾಗಿ ತೆಗೆದು ಕೊಳ್ಳಬೇಕು.
ನೀವು ಪ್ಯಾಕೆಜ್ ಟ್ರಿಪ್ ಅಲ್ಲಿ ಹೋಗುತ್ತಿದ್ದರೆ ಹೆಚ್ಚಿನ ಹಣ ಇಲ್ಲೇ ಪಾವತಿ ಮಾಡಿರುತ್ತೀರಿ. ಯಾವ ಯಾವ ಎಂಟ್ರಾನ್ಸ್ ಫೀ / ಊಟ ಪ್ಯಾಕೇಜ್ ಅಲ್ಲಿ ಇಂಕ್ಲೂಡ್ ಆಗಿಲ್ಲ ಅದಕ್ಕೆ ಕ್ಯಾಶ್ ಬೇಕು. ಶಾಪಿಂಗ್ ಗೆ ಹಣ್ಣು/ ಬ್ರೆಡ್ ಖರೀದಿಗೆ ಕೂಡಾ ಬೇಕು.
ಕೆಲವು ಕಡೆ ಶಾಪಿಂಗ್ ಸೆಂಟರ್ ಗಳಲ್ಲೂ ಫಾರೆಕ್ಸ್ ಕಾರ್ಡ್ ಬಳಸಬಹುದು. ದೊಡ್ಡ ಆಸ್ಪತ್ರೆಗಳಲ್ಲೂ, ದೊಡ್ಡ ಅಂಗಡಿಗಳಲ್ಲಿ ಫಾರೆಕ್ಸ್ ಕಾರ್ಡ್ ಬಳಕೆ ಆಗುತ್ತದೆ.
ಫಾರೆಕ್ಸ್ ಅನ್ನು ಟ್ರಿಪ್ ಗಿಂತ ತುಂಬಾ ಮೊದಲೇ ಪ್ಲ್ಯಾನ್ ಮಾಡಿ ತನ್ನಿ. ಮೊದಲೇ ಫಾರೆಕ್ಸ್ ಗೆ ಹೋಗಿ ನಿಮಗೆ ಬೇಕಾದ ಭಾಟ್ ಕ್ಯಾಶ್ ಸ್ಟಾಕ್ ಇದೆ ಎಂದು ಕೇಳಿ. ಕೆಲವೊಮ್ಮೆ ಸ್ಟಾಕ್ ಇರದಿದ್ದರೆ ಸಮಯ ಬೇಕು. ಕಡೆಯ ಕ್ಷಣಗಳಲ್ಲಿ ಹೋಗಿ ತಕ್ಷಣ ಭಾಟ್ ಕ್ಯಾಶ್ ಬೇಕು ಎಂದರೆ ಎಲ್ಲಾ ಸಲ ಸಿಗದು.
ಆನ್ ಲೈನ್ ಮನೆಗೇ ತರಿಸುವದಕ್ಕಿಂತ ನೀವೇ ಫಾರೆಕ್ಸ್ ಸೆಂಟರ್ ಗೆ ಹೋಗಿ ತಂದರೆ ನಿಮಗೆ ಕಡಿಮೆ ದರದಲ್ಲಿ ಭಾಟ್ ದೊರೆಯುತ್ತದೆ.
ಏನಾದ್ರು ಎಮರ್ಜೆನ್ಸಿ ಇದ್ದರೆ ಉಪಯೋಗಿಸಲು ಬ್ಯಾಂಕಿನ ವೀಸಾ ಅಥವಾ ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಇರಲಿ. ಅದಕ್ಕೆ ಅಂತರಾಷ್ಟ್ರೀಯ ಟ್ರಾನ್ಸಾಕ್ಷನ್ ಅನ್ನು ಅರ್ಜಿ ಕೊಟ್ಟು ಎಕ್ಟಿವೇಟ್ ಮಾಡಿಸಿಕೊಂಡರೆ ಉತ್ತಮ. ನೆನಪಿಡಿ ಈ ಡೆಬಿಟ್ ಕಾರ್ಡ್ ಕೇವಲ ಆಪತ್ಕಾಲಕ್ಕೆ ಮಾತ್ರ. ಯಾಕೆಂದರೆ ಇಂಡಿಯನ್ ಡೆಬಿಟ್ ಕಾರ್ಡ್ ನಿಂದ ಥೈಲಾಂಡ್ ಹಣ ಡ್ರಾ ಮಾಡಲು ತುಂಬಾ ಖರ್ಚು. ವಿನಿಮಯ ಬೆಲೆ ಕೂಡಾ ಜಾಸ್ತಿ.
ಆದರೆ ಅಗತ್ಯ ಇದ್ದಾಗ ಒಮ್ಮೆ ಏಟಿಎಂ ಅಲ್ಲಿ ಹೋಗಿ ವಿತ್ ಡ್ರಾ ಮಾಡಿ, ಚಿಕ್ಕ ಚಿಕ್ಕ ಅಮೌಂಟ್ ರೀತಿಯಲ್ಲಿ ಅಂಗಡಿಗಳಲ್ಲಿ ಡೆಬಿಟ್ ಕಾರ್ಡ್ ಬಳಸಬೇಡಿ. ಕ್ಯಾಶ್ ಅಥವಾ ಫಾರೆಕ್ಸ್ ಕಾರ್ಡ್ ಮಾತ್ರ ಬಳಸಿ.
ಏನೆನು ಖರ್ಚು ಎಂಬುದನ್ನು ವಿವರವಾಗಿ ನಿಮಗೆ ಮುಂದಿನ ಭಾಗಗಳಲ್ಲಿ ತಿಳಿಸುತ್ತೇನೆ.
೬. ಇರುವಷ್ಟು ದಿನಕ್ಕೆ ಕೆಲಸ ಮಾಡುವ ಮೊಬೈಲ್ ಸಿಮ್ ಕಾರ್ಡ್
ನೀವು ಹೋಗುತ್ತಾ ಇರುವದು ಹೊಸ ದೇಶಕ್ಕೆ, ಅಲ್ಲಿನ ದಾರಿ, ಜಾಗ ಎಲ್ಲ ಹೊಸತು ಹೊಸತು. ಇಂತಹ ಸಂದರ್ಭದಲ್ಲಿ ಪ್ರವಾಸಿ ತಾಣ, ಲಾಂಡ್ರಿ, ಟಾಯ್ಲೆಟ್, ಊಟ, ತಿಂಡಿ, ಭಾರತೀಯ ಹೋಟೆಲ್ ಎಲ್ಲ ಹುಡುಕಲು ಗೂಗಲ್ ಮ್ಯಾಪ್ ನಿಮ್ಮ ಆಪ್ತ ಬಾಂಧವ.
ಅಷ್ಟೇ ಅಲ್ಲ ನಿಮ್ಮ ಮನೆಗೆ ವಾಟ್ಸಪ್ ಕಾಲ್ ಮಾಡಿ ತಿಳಿಸಲೂ ಕೂಡಾ ಅನುಕೂಲ. ಒಂದು ೧೫ಜಿಬಿ ಡಾಟಾ ಇದ್ದರೆ ಸಾಕು. ಏರ್ ಪೋರ್ಟ್ ಹಾಗೂ ಹೋಟಲ್ ಗಳಲ್ಲಿ ನಿಮಗೆ ಫ್ರೀ ವೈಫೈ ಸಿಗುತ್ತೆ. ಅಲ್ಲಿ ಅದನ್ನು ಬಳಸಿ. ನೀವು ಭಾರತದಲ್ಲೇ ಮ್ಯಾಟ್ರಿಕ್ಸ್ ಸಿಮ್ ಖರೀದಿಸಿ ಹೋದರೆ ಥಾಯ್ಲೆಂಡ್ ತಲುಪಿದ ತಕ್ಷಣ ಎಕ್ಟಿವೇಟ್ ಆಗುತ್ತದೆ.
ಅಲ್ಲಿಯೂ ಕೂಡಾ ಏರ್ ಪೋರ್ಟ್ ಅಲ್ಲಿ ಲೋಕಲ್ ಸಿಮ್ ಪಡೆಯಬಹುದಾದರೂ ಎಕ್ಟಿವೇಟ್ ಆಗಲು ಸಮಯ ತಗುಲುತ್ತದೆ.
೭. ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಅಥವಾ ಕೋವಿಡ್ ಪರೀಕ್ಷೆ ರಿಸಲ್ಟ್
8. ಇಂಟರ್ ನ್ಯಾಶನಲ್ ಟ್ರಾವೆಲ್ ಇನ್ಶ್ಯುರನ್ಸ್ (ವಿಮೆ)
ಥಾಯ್ಲೆಂಡ್ ನಲ್ಲಿ ಪ್ರವಾಸದಲ್ಲಿದ್ದಾಗ ಎದುರಾಗುವ ಆಕಸ್ಮಿಕ ಖರ್ಚುಗಳಿಗೆ ಒಂದು ವಿಮೆ ಇದ್ದರೆ ಒಳ್ಳೆಯದು. ನೆನಪಿಡಿ ವಿದೇಶಗಳಲ್ಲಿ ಮೆಡಿಕಲ್ ಖರ್ಚುಗಳು ಭಾರತಕ್ಕಿಂತ ಜಾಸ್ತಿ. ಆದರೆ ಎಮರ್ಜೆನ್ಸಿ ಸಮಯದಲ್ಲಿ ಎಷ್ಟೇ ಹಣ ಆದರೂ ಅಲ್ಲೇ ಟ್ರೀಟ್ ಮೆಂಟ್ ತಗೋಬೇಕು ಅಲ್ವಾ?
ಅಕಸ್ಮಾತ್ ಯಾವುದೇ ರೀತಿಯ ಆಪತ್ಕಾಲದಲ್ಲಿ ಆರ್ಥಿಕ ಆಘಾತ ತಡೆಯುವ ಶಕ್ತಿ ಇದ್ದರೆ ವಿಮೆ ಇಲ್ಲದಿದ್ದರೂ ನಡೆದೀತು.
ಮುಖ್ಯವಾಗಿ ಈ ಮುಂದಿನ ಸಂದರ್ಭಗಳಲ್ಲಿ ಈ ವಿಮೆ ಉಪಯುಕ್ತ.
- ವಿಮಾನ ತಡ / ಕ್ಯಾನ್ಸೆಲ್ ಆಗುವದು
- ಬ್ಯಾಗೇಜ್ ತಡ / ಕಾಣೆ ಆಗುವದು
- ಆರೋಗ್ಯ ಸಮಸ್ಯೆಗಳ ಚಿಕಿತ್ಸೆ, ಎಮರ್ಜೆನ್ಸಿ ಆಪರೇಶನ್
- ಅಪಘಾತ (ಎಕ್ಸಿಡೆಂಟ್)
ಕೊನೆಯ ಮಾತು
ಇವಿಷ್ಟು ನಿಮ್ಮ ಬಳಿ ಇರಲೇ ಬೇಕಾಗಿದ್ದು, ಇನ್ನು ಸಾಮಾನ್ಯವಾಗಿ ಏನೇನು ಒಯ್ಯಬೇಕು ಅನ್ನುವದು ಮುಂಬರುವ ಭಾಗದಲ್ಲಿ ತಿಳಿಸುತ್ತೇನೆ. ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ