Slider

ಥಾಯ್ಲೆಂಡ್ ರಸ್ತೆ ಹಾಗೂ ಸ್ವಚ್ಚತೆ

 ಥಾಯ್ಲೆಂಡ್ ಗೆ ಹೋಗುವ ಮುನ್ನ ನನ್ನ ಕಲ್ಪನೆಯಲ್ಲಿ ಇದ್ದುದು ಥಾಯ್ಲೆಂಡ್ ಒಂದು ನಮ್ಮಂತೆಯೇ ಬೆಳೆಯುತ್ತಿರುವ ದೇಶ.

ಬಹುಶಃ ನಮ್ಮಲ್ಲಿನ ಹಾಗೆ ಅಗೆದ ರಸ್ತೆಗಳು, ಕಂಡ ಕಂಡಲ್ಲಿ ಗುಂಡಿಗಳು, ಅಸಹನೀಯವಾದ ಗಬ್ಬು ಮೋರಿಗಳು ಇದ್ದೀತೇನೋ ಎಂದೆಣಿಸಿದ್ದೆ.

ನಾವು ಹೊರಟಿದ್ದು ಸಪ್ಟೆಂಬರ್ ಕೊನೆಯ ವಾರ. ಆಗ ತಾನೇ ಮಳೆಗಾಲ ಮುಗಿಯುತ್ತಿರುವ ಸಮಯ.

ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಿಂದ ಹಾರಿದ ವಿಮಾನ ಸುಮಾರು 3 ಗಂಟೆಗಳ ಕಾಲ ಆಕಾಶದಲ್ಲಿ ಪಯಣಿಸಿ ಥಾಯ್ಲೆಂಡಿನ ಬ್ಯಾಂಕಾಕ್ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ರಾತ್ರಿ ೧೨ ಗಂಟೆಗೆ ಹೊರಟ ವಿಮಾನ ಅಲ್ಲಿ ತಲುಪಿದ್ದು ಬೆಳಿಗ್ಗೆ ಸುಮಾರು ಅಲ್ಲಿನ ಸಮಯ ನಾಲ್ಕುವರೆ ಗಂಟೆಗೆ. ಅಲ್ಲಿನ ಗಡಿಯಾರ ಭಾರತದಕ್ಕಿಂತ ೧:೩೦ ಗಂಟೆ ಮುಂದೆ. ಆಗ ಭಾರತದಲ್ಲಿ ನಡು ರಾತ್ರಿ ಮೂರು ಗಂಟೆ!

ರನ್ ವೇ ಅಲ್ಲಿ ಇಳಿದ ವಿಮಾನ ತನ್ನ ವೇಗ ಕಡಿಮೆ ಮಾಡುತ್ತಾ ನಿಲ್ದಾಣದ  ಕಡೆ ತಿರುಗಿ ನಿದಾನವಾಗಿ ಒಳ ರಸ್ತೆಯಲ್ಲಿ ಸಾಗಿ ಏರ್ ಪೋರ್ಟ್ ಕಟ್ಟಡದ ಬಳಿ ಉಳಿದ ವಿಮಾನಗಳ ನಡುವೆ ಹೋಗಿ ನಿಂತಿತು.

ನಿಲ್ದಾಣದ ಸುರಂಗವನ್ನು ವಿಮಾನಕ್ಕೆ ಜೋಡಿಸಿ ವಿಮಾನದ ಬಾಗಿಲು ತೆರೆಯಲಾಯ್ತು.

ನಮಗೋ ಕುತೂಹಲ. ಥಾಯ್ಲೆಂಡ್ ಹೇಗಿರಬಹುದು? ಅಲ್ಲಿ ಏರ್ ಪೋರ್ಟ್ ಹೇಗಿದ್ದೀತು? ನಮ್ಮ ದೇಶಕ್ಕೆ ಹೋಲಿಸಿದರೆ ಸ್ವಚ್ಚತೆ, ರಸ್ತೆ ಹೇಗಿದೆ ತಿಳಿಯುವ ಬಯಕೆ.

ಮಲಗಿದ್ದ ಮಕ್ಕಳನ್ನು ಎಬ್ಬಿಸಿ ತೆಗೆದಿಟ್ಟಿದ್ದ ಚಪ್ಪಲಿ ಹಾಕಿಕೊಂಡು ವಿಮಾನದ ಒಳಗೆ ಮೇಲಿಟ್ಟಿದ್ದ ಲಗೇಜ್ ಕೆಳಗಿಳಿಸಿ ನಿದಾನವಾಗಿ ಅರೆ ನಿದ್ದೆ ಮಾಡಿ ಎದ್ದ ಸ್ಥಿತಿಯಲ್ಲೇ  ವಿಮಾನದ ಹೊರ ಬಾಗಿಲತ್ತ ಸಾಗಿದೆವು.

ಪರಿಚಾರಿಕೆ ಕೈ ಮುಗಿದು ಧನ್ಯವಾದ ಹೇಳಿದಳು, ನಾವೂ ಕೂಡಾ ನಮ್ಮನ್ನು ಸುರಕ್ಷಿತವಾಗಿ ತಲುಪಿಸಿದ ಅವರೆಲ್ಲರಿಗೂ ವಂದಿಸುತ್ತಾ ಸುರಂಗದ ಒಳ ಹೊಕ್ಕಿ ನಿಲ್ದಾಣದ ಕಡೆ ಹೊರ ಬಿದ್ದೆವು.

ನಮ್ಮ ಬಳಿ ಥಾಯ್ಲೆಂಡ್ ವೀಸಾ ಇರಲಿಲ್ಲ. ಆನ್ ಅರೈವಲ್ ವೀಸಾ ನಿಲ್ದಾಣದಲ್ಲೇ ಪಡೆಯಬೇಕಿತ್ತು. ಅದಕ್ಕೆ ಬೇಕಾದ ಫೋಟೋ, ಹಣ ಎಲ್ಲದರ ವ್ಯವಸ್ಥೆ ಆಗಿತ್ತು.

ವೀಸಾ ಎಲ್ಲಿ ಕೊಡುತ್ತಾರೆ ಎಂದು ಹುಡುಕುತ್ತಾ ಹೊರಟೆವು. ವೀಸಾ ಕೌಂಟರ್ ಗೆ ಹೋಗಿ ಅರ್ಜಿ ತುಂಬಿ ಸಲ್ಲಿಸಿ ವೀಸಾ ಗೆ ಕಾಯುತ್ತಾ ಇದ್ದೆವು.

ಸುವರ್ಣಭೂಮಿ ಏರ್ ಪೋರ್ಟ್ ಒಳಗಿನಿಂದ ಹೆಚ್ಚು ಕಡಿಮೆ ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣದ ಅಷ್ಟೇ ಸುಸಜ್ಜಿತ ಕಟ್ಟಡ. ಬಹುಶಃ ಅಂತರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಕಟ್ಟಲಾಗಿದೆ.

ವೀಸಾ ಸಿಕ್ಕಾಯ್ತು! ಹುರ್ರೇ!! ಮೊದಲೇ ಟ್ರಾವೆಲ್ ಏಜೆಂಟ್ ಬುಕ್ ಮಾಡಿದ್ದ ಕ್ಯಾಬ್ ಬಂತು. ನಮ್ಮ ಲಗೇಜ್ ಹಾಕಾಯ್ತು. ನಾವೂ ಕುಳಿತಾಯ್ತು. ಕ್ಯಾಬ್ ನಿದಾನಕ್ಕೆ ಏರ್ ಪೋರ್ಟ್ ಹೊರ ಹೊರಟಿತು.

ಸುಸಜ್ಜಿತ ರಸ್ತೆಗಳು

ಟ್ಯಾಕ್ಸಿ ವಿಮಾನ ನಿಲ್ದಾಣದಿಂದ ಹೊರಟು ಸುಮಾರು ದೂರ ಸಾಗಿ ಹೈ ವೇಯಲ್ಲಿ ಹೋಟೆಲ್ ಕಡೆ ಸಾಗುತ್ತಿತ್ತು.

ಒಂದು ಪುಟ್ಟ ಮಗು ಅಚ್ಚರಿಯಿಂದ ಸುತ್ತ ನೋಡುವಂತೆ ನಾವು ಎಲ್ಲ ಕಡೆ ವೀಕ್ಷಿಸುತ್ತಿದ್ದೆವು. ನಿಲ್ದಾಣದಿಂದ ದೂರ ಸಾಗಿದಂತೆ ರಸ್ತೆಗಳು ಮಾಮೂಲಿ ರಸ್ತೆ ಆದೀತು ಎಂಬುದು ನನ್ನ ಎಣಿಕೆ ಆಗಿತ್ತು.

ಇಲ್ಲಿ ನನ್ನ ಕಲ್ಪನೆ ಎಲ್ಲಾ ತಿರುವು ಮುರುವು! ವಾರೆ ವಾಹ್. ಎಂತಹ ಅಮೋಘ ರಸ್ತೆಗಳು!!

ನಿಜ ಮೊಸರಲ್ಲೂ ಕಲ್ಲು ಹುಡುಕುವವರಿಗೆ ಎಲ್ಲೋ ಒಂದೆರಡು ಕಡೆ ಸಣ್ಣ ಬಿರುಕು ಕಂಡೀತು!

ಹೋಟೆಲ್ ಗೆ ಹೋಗುವ ದಾರಿಯಲ್ಲಿ, ನಮ್ಮ ಗಮನ ಸೆಳೆದಿದ್ದು ಅಲ್ಲಿನ ಸುಂದರ ರಸ್ತೆಗಳು!

ಸ್ವಚ್ಚ ರಸ್ತೆ, ನೀಟಾಗಿ ಮಾಡಿರುವ ರಸ್ತೆಯ ಲೇನ್ ಗುರುತುಗಳು. ಶಿಸ್ತಿನ ಸಿಪಾಯಿಯಂತೆ ತಮ್ಮ ತಮ್ಮ ಲೇನ್ ಅಲ್ಲಿ ಹೋಗುತ್ತಿರುವ ಕಾರುಗಳು, ಬಸ್ಸುಗಳು. ಇದು ಹೈವೇ ನಮ್ಮಲ್ಲೂ ಕಮ್ಮಿನಾ ಅಂದು ಕೊಳ್ಳುತ್ತಿರುವಾಗಲೇ ಸಿಟಿಯ ಒಳಗೂ ಅದೇ ಶಿಸ್ತು. ಗುಂಡಿ ಇರದ ರಸ್ತೆಗಳು.

ಹಂಪುಗಳು ಜಂಪುಗಳಂತೂ ಕಾಣಸಿಗಲಿಲ್ಲ. ಸಿಗ್ನಲ್ ಗಳನ್ನು ಸಾಧ್ಯವಿದ್ದಷ್ಟು ಅನುಸರಿಸುತ್ತಿದ್ದದ್ದು ಕಂಡು ಬಂತು.

ಕೆಲವು ಕಡೆ ಸಿಮೆಂಟಿನ ರಸ್ತೆ ಇದ್ದರೆ ಕೆಲವು ಕಡೆ ಟಾರ್ ರಸ್ತೆ ಇತ್ತು.

ನಾವು ಹೋಗಿದ್ದು ಸೆಪ್ಟೆಂಬರ್ ಅಲ್ಲಿ ಮಳೆಗಾಲ ಮುಗಿಯುವ ಸಂದರ್ಭದಲ್ಲಿ. ಆ ಸಮಯದಲ್ಲೂ ಕೂಡಾ ಅಲ್ಲಿನ ರಸ್ತೆ ಗುಂಡಿಗಳಿಲ್ಲದೇ ನೀಟಾಗಿರುವದನ್ನು ನೋಡಿದಾಗ ಅಚ್ಚರಿ ಆಯ್ತು. ಅಲ್ಲಿಯೂ ನಮ್ಮ ಮಲೆನಾಡಲ್ಲಿ ಬೀಳುವ ಹಾಗೆ ಮಳೆ ಬೀಳುತ್ತದೆ.

ನಮ್ಮಲ್ಲಿ ಮಳೆಗಾಲದ ಕೊನೆಯಲ್ಲಿ ರಸ್ತೆ ಹೇಗಿರುತ್ತೆ ಎಂಬುದನ್ನು ವಿವರಿಸ ಬೇಕಾಗಿಲ್ಲ.

ಯಾವ ರೀತಿ ಅಲ್ಲಿ ಚರಂಡಿ ನಿರ್ವಹಣೆ, ವಿದ್ಯುತ್ ತಂತಿಗಳು, ಟಿವಿ / ಆಫ್ಟಿಕಲ್ ಕೇಬಲ್ ಮಾಡುತ್ತಾರೆ? ಜೋರಾಗಿ ಮಳೆ ಬಂದರೂ ಗುಂಡಿ ಆಗದಂತೆ ಹೇಗೆ ರಿಪೇರಿ ಮಾಡುತ್ತಾರೆ. ಇವೆಲ್ಲ ಅಧ್ಯಯನ ಯೋಗ್ಯ.

ದಶಕಗಳ ಹಿಂದೆ ನಮ್ಮ ರಾಜಕಾರಣಿಗಳೆಲ್ಲ ವಿದೇಶಗಳಿಗೆ ಚರಂಡಿ-ಗಿರಂಡಿ-ಪಿರಂಡಿ ಅಧ್ಯಯನಕ್ಕೆ ಹೋಗಿ ಬಂದಂತೆ ನೆನಪು. ಏನೂ ಪ್ರಯೋಜನ ಆದ ಹಾಗೆ ಕಾಣ್ತಾ ಇಲ್ಲ. ಇಲ್ಲಿ ಹೋಗಿ ಬಂದಿದ್ದರೆ ಚೆನ್ನಾಗಿತ್ತೇನೋ!

ಶಿಸ್ತಿನಿಂದ ಸಾಗುವ ಟ್ರಾಫಿಕ್

ಹಾಗಂತ ಬ್ಯಾಕಾಂಕ್ ಅಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ವೀಕ್ ಡೇಗಳಲ್ಲಿ ವಾಹನಗಳ ಮಹಾಪೂರವೇ ಇರುತ್ತೆ. ಆದರೂ ಶಿಸ್ತಿದೆ. ಮಧ್ಯೆ ನುಗ್ಗಿ ಪದೇ ಪದೇ ಲೇನ್ ಬದಲಾಯಿಸುವದು ಕಾಣ ಸಿಗಲಿಲ್ಲ.

ಟ್ರಾಫಿಕ್ ಗೆ ಅನುಕೂಲ ಆಗುವ ಹಾಗೆ ರೋಡಿನ ಮೇಲೆ ಲೇನ್ ಮಾರ್ಕ್ ಗಳು. ಯಾವ ಪೇಂಟ್ ಬಳಸುತ್ತಾರೋ ಮಳೆಗಾಲದಲ್ಲೂ ಒಂಚೂರು ಅಳಿಸಿ ಹೋಗಿರಲಿಲ್ಲ. 

ಈ ತರಹದ ಗುಣಮಟ್ಟದ ರಸ್ತೆ ಇದ್ದರೆ ಬಹುಶಃ ಟ್ರಾಫಿಕ್ ಜಾಸ್ತಿ ಇದ್ದರೂ ಕೂಡಾ ಸರಾಗವಾಗಿ ವಾಹನಗಳು ಹೋಗುತ್ತವೆ. ಎದುರಿಗೆ ಗುಂಡಿ ಬಂತು ಎಂದು ಲೇನ್ ಬದಲಾಯಿಸೋ ಪ್ರಮೇಯ ಇಲ್ಲ.

ವಿಶಾಲವಾದ ಪುಟ್ ಪಾತ್ ಗಳು

ಅಗಲವಾದ ರಸ್ತೆಗಳಲ್ಲಿ ವಿಶಾಲವಾದ ಪುಟ್ ಪಾತ್ ಗಳಿವೆ. ಅಲ್ಲಲ್ಲೀ ನಮ್ಮಲ್ಲಿರೋ ಹಾಗೆ ಪುಟ್ಟ ಬೀದಿ ವ್ಯಾಪಾರಿಗಳನ್ನು ಪುಟ್ ಪಾತ್ ಅಲ್ಲಿ ಕಾಣಬಹುದು. ಆದರೆ ನಾವು ನಡೆಯದ ಹಾಗೆ ಆಕ್ರಮಿಸಿಕೊಂಡಿರುವದಿಲ್ಲ.

ಪುಟ್ ಪಾತ್ ಗಳಲ್ಲಿ ಅನೇಕ ಕಡೆ ಚಿಕ್ಕ ಚಿಕ್ಕ ಮರಗಳಿದ್ದವು. ನೀಟಾಗಿ ಅವುಗಳ ಬುಡದಲ್ಲಿ ಚೌಕಾಕಾರದಲ್ಲಿ ಜಾಗ ಬಿಟ್ಟಿದ್ದರು. ಮೆಟ್ರೋದ ಹಾದಿಯ ಕೆಳಗೆ ಕೂಡಾ ಮರಗಳಿದ್ದವು.

ಕಿರಿದಾದ ರಸ್ತೆಗಳಲ್ಲಿ ಒಂದೇ ಕಡೆ ಪುಟ್ ಪಾತ್ ಇತ್ತು.

ಒಂದೆರಡು ಸ್ಯಾಂಪಲ್ ಬ್ಯಾಂಕಾಕ್, ಥಾಯ್ಲೆಂಡ್ ಫುಟ್ ಪಾತ್ ಚಿತ್ರ ನಿಮಗಾಗಿ.


ರಸ್ತೆ ಅಗೆತ, ಕಸದ ರಾಶಿ ಇಲ್ಲ

ಎಲ್ಲೂ ಅನವಶ್ಯಕ ಅಗೆತ ಇಲ್ಲ. ಮಣ್ಣಿನ ಮರಳಿನ ಗುಡ್ಡೆ ಹಾಕಿ ರಾಡಿ ಮಾಡಿಲ್ಲ. ಕಂಡ ಕಂಡಲ್ಲಿ ಕಸ ಬಿಸಾಕಿದ್ದು ಎಲ್ಲೂ ಕಂಡ ನೆನಪಿಲ್ಲ.

ವೈರ್ ಗಳು ಕೇಬಲ್ ಗಳೆಲ್ಲವನ್ನೂ ನೀಟಾಗಿ ಕಟ್ಟಿ ರಸ್ತೆಯ ಪಕ್ಕದ ಕಂಬದಲ್ಲಿ ಇತ್ತು. ಬಹುಶಃ ಅದು ಕೂಡಾ ರಸ್ತೆ ಅಗೆತ ಕಡಿಮೆ ಆಗಲು ಕಾರಣ ಇರಬಹುದು.

ಇದು ಕೇವಲ ಮುಖ್ಯ ರಸ್ತೆ ಮಾತ್ರ ಅಲ್ಲ ನಾವು ಓಡಾಡಿದ ಒಳ ರಸ್ತೆಗಳೂ ಅಷ್ಟೇ ನೀಟು ಮತ್ತು ಕ್ಲೀನ್.

ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ರಸ್ತೆಯ ಮಧ್ಯೆ ಮನೋಹರ ಗಾರ್ಡನ್

ಥಾಯ್ಲೆಂಡ್ ರಸ್ತೆಯೇನೋ ಸುಂದರ ಮಾತಿಲ್ಲ. ಅದಕ್ಕಿಂತ ಸುಂದರ ಅದರ ಮಧ್ಯೆ ಇರುವ ಹಾಗೂ ಕೆಲವೊಮ್ಮೆ ಪುಟ್ ಪಾತ್ ಅಲ್ಲಿ ಕೂಡಾ ಇರುವ ಗಾರ್ಡನ್. ಹೆಚ್ಚಿನ ಹೈವೇ, ಮೆಟ್ರೋ ಮಾರ್ಗದ ಕೆಳಗೆ ಇದನ್ನು ಕಾಣಬಹುದು.

ಯಾರೋ ಕಾಲ ಕಾಲಕ್ಕೆ ಅವನ್ನೆಲ್ಲಾ ನೀಟಾಗಿ ಟ್ರಿಮ್ ಮಾಡಿ ಆಕಾರ ಕೊಟ್ಟಂತೆ ಇತ್ತು.

ಕಂಡ ಕಂಡಲ್ಲಿ ಜಾಹೀರಾತು ಬೋರ್ಡ್ ಗಳಿಲ್ಲ. ಆಯಾ ನಿಗದಿತ ಜಾಗದಲ್ಲಿ ಮಾತ್ರ ಜಾಹೀರಾತು ಫಲಕ ಇದ್ದವು.

ಕಸದ ರಾಶಿ ಅಂತೂ ಇಲ್ಲವೇ ಇಲ್ಲ.

ಥಾಯ್ಲೆಂಡ್ ಅಲ್ಲಿ ಮುಖ್ಯ ರಸ್ತೆಗಳಲ್ಲಿ ನೀಟಾಗಿ ಬೆಳೆಸಿದ ಪೊದೆಗಳನ್ನು ಮರಗಳನ್ನು ಕಾಣಬಹುದು. ತೀರಾ ಕಿರಿದಾದ ರಸ್ತೆಗಳಲ್ಲಿ ಮರ-ಗಿಡಗಳಿರುವದಿಲ್ಲ. ಹಾಗೂ ಒಂದೇ ಕಡೆ ಫುಟ್ ಪಾತ್ ಇರುತ್ತದೆ.

ಈ ಕೆಳಗಿನ ಮೂರು ಚಿತ್ರ ಒಮ್ಮೆ ನೋಡಿ. ಇವು ಕೇವಲ ಸ್ಯಾಂಪಲ್ ಮಾತ್ರ. ಇವೆಲ್ಲ ಬ್ಯಾಂಕಾಕ್ ಸಿಟಿಯವು.

ರಸ್ತೆಗೆ ಹಾಕಿದ ಗೆರೆ, ನಡುವಿನ ಸುಂದರ ಉದ್ಯಾನವನ ಗಮನಿಸಿ.





ಉತ್ತಮ ವೈರ್ ನಿರ್ವಹಣೆ

ವೈರ್ ನಿರ್ವಹಣೆ ಅತ್ಯುತ್ತಮ ಅಂತಾನೆ ಹೇಳಬಹುದು. ಎಲ್ಲೂ ನಿಮಗೆ ಅಡ್ಡಾದಿಡ್ಡಿಯಾಗಿ ರಸ್ತೆಯೆಲ್ಲಾ ತುಂಬಿ ತುಳುಕುವ ವೈರ್ ಸಿಗದು. ಬದಲಾಗಿ ರಸ್ತೆಯ ಒಂದು ಕಡೆ ಜಡೆಯಂತೆ ನೀಟಾಗಿ ಹೆಣೆದು ಕಟ್ಟಿರುತ್ತಾರೆ. ನಿಜ ತುಂಬಾ ವೈರ್ ಇರುತ್ತೆ ಆದರೆ ಒಂದೇ ಕಡೆ ಕಂಬಕ್ಕೆ ಕಟ್ಟಿರುತ್ತಾರೆ.

ಬಹುಶಃ ವೈರ್ ಹೊರಗೆ ಇರುವದರಿಂದ ಪದೇ ಪದೇ ರಸ್ತೆ ಅಗೆಯುವದು ತಪ್ಪುತ್ತೇನೋ! ತಿಳಿದವರು ಹೇಳಬೇಕು.

ಕಸದ ಉತ್ತಮ ನಿರ್ವಹಣೆ

ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ಒಂದು ಸಿಟಿ ಕ್ಲೀನ್ ಅನ್ನಿಸಲು ಅಲ್ಲಿನ ಕಸದ ನಿರ್ವಹಣೆ ಮುಖ್ಯ ಕಾರಣ. ಎಷ್ಟೋ ಕಡೆ ಅಂಗಡಿ, ಅಪಾರ್ಟಮೆಂಟ್ ಅಲ್ಲಿ ಕಸವನ್ನು ನೀಟಾಗಿ ಕಪ್ಪು ಕವರ್ ಅಲ್ಲಿ ಹಾಕಿ ಇಲ್ಲಾ ಕಸದ ಬುಟ್ಟಿಯಲ್ಲಿ ಹಾಕುತ್ತಿರುವದು ಕಂಡು ಬಂತು.

ಸೂಪರ್ ಮಾರ್ಕೆಟ್ ಅಲ್ಲಿ ಯಾರೋ ಏನನ್ನೋ ಚೆಲ್ಲಿ ರಾಡಿ ಮಾಡಿದಾಗ ತಕ್ಷಣ ಒಬ್ಬಳು ಬಂದು ಅದನ್ನು ಕ್ಲೀನ್ ಮಾಡಿದ್ದು ಕಂಡು ಬಂತು.

ನಾವು ಹಲವು ಲೋಕಲ್ ಬಸ್ ಅಲ್ಲಿ ಪ್ರಯಾಣ ಮಾಡಿದ್ದೆವು. ಆಗ ಒಂದು ಬಸ್ ಅಲ್ಲಿ ಡ್ರೈವರ್ ಕೂಡಾ ಕಸಬರಿಗೆ ಹಿಡಿದು ಬಸ್ ಒಳಗೆ ಕಸ ಗುಡಿಸಿ ಸ್ವಚ್ಚ ಮಾಡಿದ! ಬಸ್ ಹಿಂದೆ ನಾವು ಕುಳಿತ ಜಾಗದ ಪಕ್ಕ ಮೋಪ್ (ಒರೆಸುವ ಕೋಲು) ಬೇರೆ ಇತ್ತು. ಅದನ್ನು ಯಾವಾಗ ಬಳಸುತ್ತಾರೊ ಗೊತ್ತಿಲ್ಲ. ಅವರ ಸ್ವಚ್ಚತೆಯ ಕಾಳಜಿಗೆ ಇದು ನಿದರ್ಶನ.

ಅಲ್ಲಿನ ಸ್ವಚ್ಚತೆ ಗಮನಿಸಿದಾಗ ನಮಗೆ ಕೈಯಲ್ಲಿದ್ದ ಖಾಲಿ ಚಿಪ್ಸ್ ಪ್ಯಾಕೆಟ್ ಬಿಸಾಕಲೂ ಸಹ ಮನಸ್ಸು ಬರದು!

ಪಬ್ಲಿಕ್ ಟಾಯ್ಲೆಟ್ ಗಳು

ಪಬ್ಲಿಕ್ ಟಾಯ್ಲೆಟ್ ಗಳು ಬ್ಯಾಂಕಾಕ್ ಅಲ್ಲಿ ಪರವಾಗಿಲ್ಲ ಅನ್ನ ಬಹುದು. ಆದರೆ ಪಟ್ಟಾಯದ ಐಲ್ಯಾಂಡ್, ತೇಲಾಡುವ ಮಾರ್ಕೆಟ್ ನಂತಹ ಹಳ್ಳಿಯ ಕಡೆ ಬಾತ್ ರೂಂ ಸಾಧಾರಣ ಇತ್ತು. ಆದರೆ ಎಲ್ಲೂ ಮೂಗು ಮುರಿಯುವಷ್ಟು ಗಲೀಜಾಗಿರಲಿಲ್ಲ. ಸ್ವಲ್ಪ ಹಳೆಯದಾಗಿತ್ತು ಅನ್ನ ಬಹುದು.

ಎಲ್ಲ ಕಡೆ ನೀರಿನ ವ್ಯವಸ್ಥೆ ಇತ್ತು. ಅಲ್ಲಿಯೂ ಕೂಡಾ ಶೌಚಾಲಯದಲ್ಲಿ ಏಷಿಯಾದ ಇತರ ದೇಶಗಳಂತೆಯೇ ನೀರಿನ ಬಳಕೆ ಜಾಸ್ತಿ ಅದಕ್ಕೆ ಟಾಯ್ಲೆಟ್ ಎಲ್ಲಾ ಒದ್ದೆ ಒದ್ದೆ.

ಕೊನೆಯ ಮಾತು


ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ಉತ್ತಮ ರಸ್ತೆ, ಸ್ವಚ್ಚ ಜಾಗ ನಮ್ಮಲ್ಲೂ ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಐಟಿ ಪಾರ್ಕ್ ಅಲ್ಲಿ ಕಂಡು ಬರುತ್ತೆ. ಅದು ವಿಶೇಷ ಅಲ್ಲ. 

ಆದರೆ ಇಡಿ ಸಿಟಿಗೆ ಸಿಟಿ, ಪಟ್ಟಣಕ್ಕೆ ಪಟ್ಟಣ ಸ್ವಚ್ಚ ಆಗಿರುವದು ಥಾಯ್ಲೆಂಡ್ ಸಿಟಿ ವಿಶೇಷ. ಅಲ್ಲಿನ ಜನ, ಅಂಗಡಿ ಎಲ್ಲ ಕಡೆ ಜಾಗ್ರತರಾಗಿ ಕಸ ಕ್ಲೀನ್ ಮಾಡುತ್ತಾ ಇರುವದು ಥಾಯ್ಲೆಂಡ್ ಅಲ್ಲಿ ಕಾಣ ಬಹುದು.

ಕನಿಷ್ಟ ನಾವು ಪ್ರವಾಸಿಗಳು ಓಡಾಡುವ ಜಾಗದಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ ಸ್ವಚ್ಚತೆ ಇತ್ತು.

ನಾವು  ಥಾಯ್ಲೆಂಡ್ ಅಲ್ಲಿ ಇದ್ದದ್ದು ೯ ದಿನ ಮಾತ್ರ. ಆ ಸಂದರ್ಭದ ತಿರುಗಾಟದಲ್ಲಿ ಕಂಡದ್ದು ಇಷ್ಟು. ನಿಜ ಹುಳುಕನ್ನೇ ಹುಡುಕಿ ಹೋದರೆ ಎಲ್ಲಾದರೂ ಸಿಕ್ಕು ಬಿಡುತ್ತಿತ್ತೇನೋ. ಪ್ರವಾಸಿಗಳು ಓಡಾಡುವ ಜಾಗವನ್ನಾದರೂ ಇಷ್ಟು ಕ್ಲೀನಾಗಿ ಇಟ್ಟಿರುವದು ನಿಜಕ್ಕೂ ಗ್ರೇಟ್!

ನಾವು ಥಾಯ್ಲೆಂಡ್ ಜನತೆಯಿಂದ ಕಲಿಯುವ ಸ್ವಚ್ಚತೆಯ ಪಾಠ ತುಂಬಾ ಇದೆ. ಅದರ ಜೊತೆಗೆ ನಮ್ಮಲ್ಲಿನ ಬ್ರಷ್ಟಾಚಾರಕ್ಕೂ ಕಡಿವಾಣ ಬೇಕು. ಬಹುಶಃ ದೊಡ್ಡ ಖಾಸಗಿ ಕಂಪನಿಗಳು ರಸ್ತೆ ನಿರ್ಮಾಣ-ನಿರ್ವಹಣೆ ಮಾಡಿದರೆ ಒಳ್ಳೆಯದೇನೋ.

ಒಟ್ಟಿನಲ್ಲಿ ಥಾಯ್ಲೆಂಡ್ ನ ಬ್ಯಾಂಕಾಕ್, ಪಟ್ಟಾಯಾ ಕಸ ನಿರ್ವಹಣೆ, ರಸ್ತೆ, ಫುಟ್ ಪಾತ್ ಮೊದಲಾದವುಗಳಿಗೆ ಮಾದರಿ ಎಂದರೆ ತಪ್ಪಲ್ಲ.

ನೀವು ಥಾಯ್ಲೆಂಡ್ ಗೆ ಹೋಗಿದ್ರಾ? ನಿಮಗೆ ಏನು ಅನ್ನಿಸಿತು? ಕಮೆಂಟ್ ಹಾಕಿ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ